ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳ ಮನೆ, ಕಚೇರಿಗಳ ದಾಳಿ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಮೊದಲ ಬಾರಿಗೆ, ಬ್ರೋಕರ್ ಗಳ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಪಾಸ್ತಿಗಳನ್ನು ಪತ್ತೆಮಾಡಿದ್ದಾರೆ.
ಬಿಡಿಎ ನಲ್ಲಿ ಮಧ್ಯ ವರ್ತಿ (ಬ್ರೋಕರ್) ಗಳಾಗಿ ಭಾರೀ ಪ್ರಮಾಣದ ಅಕ್ರಮ ಆಸ್ತಿ ಪಾಸ್ತಿಗಳನ್ನು ಗಳಿಸಿರುವ ಮಾಹಿತಿಯನ್ನು ಕಲೆಹಾಕಿ 9 ಮಂದಿ ಬ್ರೋಕರ್ ಗಳನ್ನು ಬಲೆಗೆ ಕೆಡವಿರುವ ಎಸಿಬಿ ಅಧಿಕಾರಿಗಳು ಅವರ ಮನೆ, ಕಚೇರಿಗಳಲ್ಲಿ ಶೋಧ ನಡೆಸಿದ್ದಾರೆ.
ಭ್ರಷ್ಟ ಅಧಿಕಾರಿಗಳಿಗೆ ಗಾಳ ಹಾಕಿ ಅಕ್ರಮ ಆಸ್ತಿ ಪಾಸ್ತಿಗಳನ್ನು ಜಾಲಾಡುತ್ತಿದ್ದ ಎಸಿಬಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ಬ್ರೋಕರ್ ಗಳ ಅಕ್ರಮಗಳ ಪರಿಶೀಲನೆ ಕೈಗೊಂಡಿದ್ದಾರೆ.
ಎಸಿಬಿ ಎಸ್ ಪಿ ಉಮಾ ಪ್ರಶಾಂತ್ ಅವರ ನೇತೃತ್ವದ 100ಕ್ಕೂ ಹೆಚ್ಚು ಅಧಿಕಾರಿಗಳು ಚಾಮರಾಜಪೇಟೆ, ದೊಮ್ಮಲೂರು, ಮಲ್ಲತ್ತಹಳ್ಳಿ, ಮನೋರಾಯನಪಾಳ್ಯ,ಸೇರಿದಂತೆ ನಗರದ 9 ಕಡೆ ದಾಳಿ ಮಾಡಿದ್ದಾರೆ.
ಬ್ರೋಕರ್ ಗಳಾದ ರಘು ಬಿ ಎನ್.ಚಾಮರಾಜಪೇಟೆ, ಮೋಹನ್ ಮನೋರಾಯನಪಾಳ್ಯ, ಮನೋಜ್ ದೊಮ್ಮಲೂರು, ಮುನಿರತ್ನ ರತ್ನವೇಲು ಮಲ್ಲತ್ತಹಳ್ಳಿ, ತೇಜುತೇಜಸ್ವಿ ಆರ್ಆರ್ ನಗರ, ಅಶ್ವತ್ ಮುದ್ದಿನಪಾಳ್ಯ, ಲಕ್ಷ್ಮಣ ಚಾಮುಂಡೇಶ್ವರಿ ನಗರ, ಚಿಕ್ಕಹನುಮ್ಮಯ್ಯ ಮುದ್ದಿನಪಾಳ್ಯ ಎಂಬವರ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಬಿಬಿಎಂಪಿ, ಬಿಡಿಎಗೆ ಸಂಬಂಧಿಸಿದ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು, ದಾಳಿಯಲ್ಲಿ ಸಿಕ್ಕ ದಾಖಲೆಗಳ ಅಧಾರದ ಮೇಲೆ ಮಧ್ಯವರ್ತಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ದೊಮ್ಮಲೂರಿನ ಬಿಡಿಎ ಬ್ರೋಕರ್ ಮನೋಜ್ ಮನೆಯಲ್ಲಿ ದೇಶ ಹಾಗೂ ವಿದೇಶಗಳ ಪ್ರತಿಷ್ಠಿತ ಬ್ರಾಂಡ್ನ ಸನ್ ಗ್ಲಾಸಸ್ ಹಾಗೂ ವಾಚ್ ಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೋಕರ್ ಗಳ ಮನೆ ಮೇಲೆ ಮುಂಜಾನೆಯಿಂದ ನಡೆದಿರುವ ದಾಳಿಯು ಮಧ್ಯಾಹ್ನದವರೆಗೆ ಮುಂದುವರೆದಿದ್ದು ಅಕ್ರಮ ಆಸ್ತಿಪಾಸ್ತಿಯ ಒಟ್ಟಾರೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
50-50 ಮೋಹನ್ ಎಂದೇ ಕುಖ್ಯಾತಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ) ದ ಬ್ರೋಕರ್ ಮೋಹನ್ ಮನೆಯಲ್ಲಿ ಕೋಟ್ಯಂತರ ಮೌಲ್ಯದ 600 ಸೆಂಟ್ ವಜ್ರ 5 ಕೆಜಿ ಚಿನ್ನ, ಬೆಳ್ಳಿ ತಟ್ಟೆ, ಲೋಟ, ದೀಪದ ಕಂಬಗಳು ಎಸಿಬಿ ದಾಳಿಯಲ್ಲಿ ಪತ್ತೆಯಾಗಿವೆ.
ಮೋಹನ್ ಮನೆಯ ಶೋಧ ಕಾರ್ಯ ಮುಂದುವರೆಸಿ ಚಿನ್ನ – ಬೆಳ್ಳಿ ಖರೀದಿಸಿದ ಮೂಲ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಬಿಡಿಎ ಎಲ್ಲರೂ ಮೋಹನ್ ನನ್ನು 50-50 ಮೋಹನ್ ಎಂದೇ ಕರೆಯುತ್ತಿದ್ದರು. ನಿವೇಶನ ಡೀಲ್, ಮುಂದೂಗದ ಫೈಲ್, ಹಳೇ ಪ್ರಕರಣಗಳಿಗೆ ಮರುಜೀವ. ಹೀಗೆ ಎಲ್ಲದರಲ್ಲೂ ವ್ಯವಹಾರ ಕುದುರಿಸುತ್ತಿದ್ದ. ಯಾವುದೇ ಡೀಲ್ ನಲ್ಲೂ ಶೇ.50 ವ್ಯವಹಾರ ಮಾಡುವುದರಿಂದ 50-50 ಮೋಹನ್ ಎಂದೇ ಕುಖ್ಯಾತಿ ಹೊಂದಿದ್ದ.
ಇತ್ತೀಚೆಗೆ ಬಿಡಿಎ ಅಧ್ಯಕ್ಷ ವಿಶ್ವನಾಥ್ ಸರ್ಕಾರಿ ಯೋಜನೆ ದಾಖಲೆಗಳೆಲ್ಲವೂ ಮಧ್ಯವರ್ತಿಗಳ ಮನೆಯಲ್ಲಿವೆ ಎಂದು, ಖುದ್ದು ಮೋಹನ್ ವಿರುದ್ಧ ಆರೋಪ ಮಾಡಿದ್ದರು.
ಈ ಸಂಬಂಧ ವಿಶ್ವನಾಥ್ ಹಾಗೂ ಹಿಂದಿನ ಬಿಡಿಎ ಆಯುಕ್ತ ಮಹದೇವ್ ಹಾಗೂ ಬ್ರೋಕರ್ ಮೋಹನ್ ಮಧ್ಯೆ ದೊಡ್ಡ ಮಟ್ಟದ ವಾರ್ ನಡೆದಿತ್ತು. ಆದರೂ ಬಿಡಿಎನಲ್ಲಿ ಗಟ್ಟಿ ನೆಲೆಯೂರಿದ್ದ ಮೋಹನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇತ್ತೀಚೆಗೆ ಅರ್ಕಾವತಿ ವಿಚಾರದಲ್ಲೂ ಮೋಹನ್ ಕೈಚಳಕ ಎಂದು ಸಂಶಯ ವ್ಯಕ್ತವಾಗಿದೆ.
ಬಿಡಿಎ ಭ್ರಷ್ಟಾಚಾರ ಸಂಬಂಧ ವಿಶ್ವನಾಥ್ ಹಿಂದೆಯೇ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಕೆಳಹಂತದ ಅಧಿಕಾರಿಗಳು ಲಂಚ ಇಲ್ಲದೇ ಕೆಲಸ ಮಾಡುವುದಿಲ್ಲ ಎಂಬ ದೂರುಗಳಿವೆ. ಏನೇ ಕ್ರಮ ತೆಗೆದುಕೊಂಡರೂ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಾರೆ. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಪಿಸಿದ್ದರು.