ಬೆಂಗಳೂರು: ವ್ಯವಹಾರಗಳ ಸಂಬಂಧ ಸಾರ್ವಜನಿಕರಿಂದ ದೂರುಗಳ ಹಿನ್ನೆಲೆಯಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಡಾ. ನಾಗರಾಜಪ್ಪ ಅವರಿಗೆ ಸಂಬಂಧಿಸಿದ 5 ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ಭೋವಿ ಅಭಿವೃದ್ಧಿ ನಿಗಮದ ಎಂ.ಡಿ ಲೀಲಾವತಿ ಹಾಗೂ ನಾಗರಾಜ್ ರ ಕಚೇರಿ ಮನೆಗಳ ಮೇಲೆ ನಡೆದ ದಾಳಿಯಲ್ಲಿ 10 ಲಕ್ಷ ರೂ. ಪತ್ತೆಯಾಗಿದ್ದು ಅದನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿ ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಗೆ ಸೇರಿದ 5 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ನಾಗರಾಜಪ್ಪ ಅವರ ವಿಜಯನಗರದ ಎಂ. ಸಿ. ಲೇಔಟ್ ನ ವಾಸದ ಮನೆ,ಸಹೋದರನ ಮನೆ,ಪರಿಚಿತೆಯ ಮಾಗಡಿ ರಸ್ತೆ ಸನ್ಪ್ಲರ ವರ್ ಅಪಾರ್ಟ್ಮೆಂಟ್ ನಲ್ಲಿನ ವಾಸದ ಮನೆ, ಹೊಸಕೋಟೆ ತಾಲ್ಲೂಕು ಬೆನ್ನಿಗಾನಹಳ್ಳಿಯ ವಾಸದ ಮನೆ, ಸಂಬಂಧಿಕರ ಚೆನ್ನಪಟ್ಟಣ ತಾಲ್ಲೂಕಿನ ಹಾರೋಕೊಪ್ಪೆ ವಾಸದ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಲಾಗಿದೆ.
ದಾಳಿಯಲ್ಲಿ ನಾಗರಾಜಪ್ಪ ಆದಾಯಕ್ಕೂ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿ ಪಾಸ್ತಿಯನ್ನು ಗಳಿಸಿರುವುದು ಪತ್ತೆಯಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.