ಹೈದರಾಬಾದ್: ಬಿಬಿಸಿ, 2002ರ ಗುಜರಾತ್ ಗಲಭೆ ಬಗ್ಗೆ ಬಿಡುಗಡೆ ಮಾಡಿರುವ ಸಾಕ್ಷ್ಯಚಿತ್ರವನ್ನು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ- ಎಸ್’ಎಫ್’ಐ ಸಂಘಟನೆಯವರು ಗುರುವಾರ ಹೈದರಾಬಾದ್ ವಿಶ್ವವಿದ್ಯಾನಿಲಯದ ಕ್ಯಾಂಪಸಿನೊಳಗೆ ಮತ್ತೊಮ್ಮೆ ಪ್ರದರ್ಶಿಸಿದರು.
ಇದಕ್ಕೆ ಪ್ರತಿಯಾಗಿ ಆರೆಸ್ಸೆಸ್ ನವರ ವಿದ್ಯಾರ್ಥಿ ಸಂಘಟನೆ ಎಬಿವಿಪಿಯವರು ಕೂಡ ವಿವಾದಿತ ದ ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದರು.
ಹೈದರಾಬಾದ್ ವಿಶ್ವವಿದ್ಯಾನಿಲಯದ ಸಹೋದರತ್ವ ಚಳವಳಿಯ ವಿದ್ಯಾರ್ಥಿಗಳ ಸಂಘಟನೆಯು ಮೊದಲಿಗೆ ಬಿಬಿಸಿಯವರ ‘ಇಂಡಿಯಾ: ದ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರವನ್ನು ಜನವರಿ 21ರಂದು ಪ್ರದರ್ಶಿಸಿದ್ದರು. ಯಾವುದೇ ಅನುಮತಿ ಪಡೆಯದೆ ಪ್ರದರ್ಶನ ನಡೆಸಿದ್ದರಿಂದ ವಿವಿಯು ಈ ಬಗ್ಗೆ ವರದಿ ಮತ್ತು ಕ್ರಮ ಕೈಗೊಳ್ಳಲು ಮುಂದಾಗಿದೆ.
ಈಗ ಜಾಲ ತಾಣಗಳಲ್ಲಿ ಬಿಡುಗಡೆಯಾಗಿರುವ ಬಿಬಿಸಿಯವರ ‘ಇಂಡಿಯಾ: ದ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರವನ್ನು ಎಸ್ ಎಫ್ ಐ ಕೂಡ ವಿವಿ ಕ್ಯಾಂಪಸಿನಲ್ಲಿ ಪ್ರದರ್ಶಿಸಿದೆ.
“ಗಣರಾಜ್ಯ ದಿನದಂದು ಎಸ್ ಎಫ್ ಐ ಸಿಇಸಿ ಕರೆನೀಡಿ ‘ಇಂಡಿಯಾ: ದ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರವನ್ನು ಎಸ್ ಎಫ್ ಐ ಎಚ್ ಸಿಯು ಮಿಂಚು ನೋಟದಂತೆ ಪ್ರದರ್ಶಿಸಿದೆ. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ವೀಕ್ಷಿಸಿದರು. ಎಬಿವಿಪಿಯವರ ಸುಳ್ಳುಪ್ರಚಾರ ಮತ್ತು ಗಲಭೆ ಪ್ರಚೋದನೆಗಳಿಗೆ ಸವಾಲಾಗಿ ಈ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಮುಕ್ತ ಅಭಿಪ್ರಾಯ ಹಂಚಿಕೆಗೆ ಒಟ್ಟಾಗಿ ನಿಂತ ಎಲ್ಲ ವಿದ್ಯಾರ್ಥಿಗಳಿಗೆ ಎಸ್ ಎಫ್ ಐ ಎಚ್ ಸಿಯು ಅಭಿನಂದನೆ ಸಲ್ಲಿಸುತ್ತದೆ” ಎಂದು ಎಸ್ ಎಫ್ ಐ ಎಚ್ ಸಿಯುನ ಒಂದು ಸಾಮಾಜಿಕ ಜಾಲ ತಾಣ ಪೋಸ್ಟ್ ನಲ್ಲಿ ಹೇಳಲಾಗಿದೆ.
ಇದಕ್ಕೆ ಪ್ರತಿಯಾಗಿ ವಿವಿ ಕ್ಯಾಂಪಸಿನಲ್ಲಿ ಎಬಿವಿಪಿಯವರು ಕಾಶ್ಮೀರಿ ಫೈಲ್ಸ್ ಚಿತ್ರ ಪ್ರದರ್ಶನ ನಡೆಸಿದರು.
ವಿವೇಕ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ ಚಿತ್ರದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಲೆಕ್ಕಾಚಾರದಿಂದ ಕಾಶ್ಮೀರಿ ಹಿಂದೂಗಳನ್ನು ಕೊಂದರು ಎಂದು ತೋರಿಸಲಾಗಿದೆ.
ವಿದ್ಯಾರ್ಥಿಗಳ ಒಳಿತಿಗಾಗಿ, ಕಾನೂನು ಸುವ್ಯವಸ್ಥೆ ಪಾಲನೆಗಾಗಿ, ಕ್ಯಾಂಪಸಿನಲ್ಲಿ ಸಹಮತ ಕಾಪಾಡಲು ಹಾಗೂ ಮುಂದಿನ ವಾರ ಆರಂಭವಾಗುವ ಸೆಮಿಸ್ಟರ್ ಪರೀಕ್ಷೆಗಳ ಕಾರಣಕ್ಕೆ ಯಾರೂ ಯಾವುದೇ ಚಿತ್ರ ಪ್ರದರ್ಶಿಸಬಾರದು ಎಂದು ಹೈದರಾಬಾದ್ ವಿವಿ ರಿಜಿಸ್ಟ್ರಾರ್ ದೇವೇಶ್ ನಿಗಮ್ ಹೇಳಿಕೆ ನೀಡಿದ್ದಾರೆ.
ಆದರೆ ವಿದ್ಯಾರ್ಥಿಗಳು ತಮ್ಮ ಪ್ರಚಾರ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
“ಒಂದು ಗುಂಪು ಹಾಸ್ಟೆಲ್ ನಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಿತ್ತು ಎಂದು ತಿಳಿದು ಬಂದಿದೆ; ಕ್ಯಾಂಪಸ್ ಶಾಂತಿಯಿಂದಲೇ ಇದೆ” ಎಂದು ಅವರು ಹೇಳಿದ್ದಾರೆ.