ಅಹ್ಮದಾಬಾದ್: ಬರೋಡದ ಎಂಎಸ್’ಯು- ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯವು ಬುಧವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಭಾಗವಹಿಸುವುದನ್ನು ಎಬಿವಿಪಿ ಅಖಿಲ ಆಕ್ಷೇಪಿಸಿದೆ ಎಂಬ ಕಾರಣ ನೀಡಿ ವಿಶ್ವವಿದ್ಯಾಲಯ ವಿಚಾರ ಸಂಕಿರಣವನ್ನೇ ರದ್ದುಪಡಿಸಿದ ಪ್ರಸಂಗ ನಡೆದಿದೆ.
“ಪ್ರೊಫೆಸರ್ ಜುಬೈರ್ ಮೀನೈ ಅವರು ಒಬ್ಬ ಕಮ್ಯೂನಿಸ್ಟ್ ಹಾಗೂ ಭಾರತ ವಿರುದ್ಧ ಹೇಳಿಕೆ ನೀಡಿದ್ದರು” ಎಂದು ಆರೆಸ್ಸೆಸ್- ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ನಾಯಕರು ಆಪಾದಿಸಿದ್ದಾರೆ.
ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದ ಸಾಮಾಜ ಸೇವೆ ವಿಭಾಗವು ‘ಜಂಟಿ ಸಾಮಾಜಿಕ ಕಾರ್ಯಾಚರಣೆಯ ಮೂಲಕ ವೈವಿಧ್ಯತೆಯನ್ನು ಗೌರವಿಸುವುದು’ ಎನ್ನುವ ವಿಚಾರ ಸಂಕಿರಣವನ್ನು ಮಾರ್ಚ್ 15ರಂದು ಹಮ್ಮಿಕೊಂಡಿತ್ತು.
ಆಮಂತ್ರಣ ಪತ್ರದಲ್ಲಿ ಹೊಸ ದಿಲ್ಲಿಯ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದ ಸಮಾಜ ಸೇವೆ ವಿಭಾಗದ ಪ್ರೊ. ಜುಬೈರ್ ಮೀನೈ ಅವರ ಹೆಸರು ಕೂಡ ಇತ್ತು. ಆದರೆ ಕಾರ್ಯಕ್ರಮ ಆರಂಭವಾಗುವ ಹೊತ್ತಿಗೆ ಕಾರ್ಯಕ್ರಮ ಸ್ಥಳದ ಹತ್ತಿರ ಬಂದ ಎಬಿವಿಪಿಯವರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತ ಕಾರ್ಯಕ್ರಮ ರದ್ದು ಪಡಿಸುವಂತೆ ಸಂಘಟಕರ ಮೇಲೆ ಒತ್ತಡ ಹೇರಿದರು.
ಸಮಾಜ ಸೇವೆ ವಿಭಾಗದ ಡೀನ್ ಡಾ. ಭಾವ್ನಾ ಮೆಹ್ತಾರನ್ನು ಸುತ್ತುವರಿದ ಎಬಿವಿಪಿಯವರು ವಾಗ್ವಾದ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ.
ಭಾರತ ವಿರೋಧಿ ಹೇಳಿಕೆ ನೀಡುವ ಪ್ರೊ. ಮೀನೈ ಅವರನ್ನು ಆಹ್ವಾನಿಸಿದ್ದು ಏಕೆ ? ಎಂದು ಒಬ್ಬ ಎಬಿವಿಪಿಯವನು ಕೇಳಿದ. ಅವರು ಪ್ರಸಿದ್ಧ ವಿದ್ವಾಂಸರಾದ್ದರಿಂದ ಆಹ್ವಾನಿಸಲಾಗಿದೆ ಎಂದು ಸಂಘಟಕರು ಉತ್ತರ ನೀಡಿದರು.
ಇನ್ನು ಮುಂದೆ ಎಂದೂ ಇಂತಹವರನ್ನು ಕರೆಸಬಾರದು ಎಂದು ಡೀನ್ ಅವರ ಬಳಿ ಎಬಿವಿಪಿಯವರು ವಾಗ್ವಾದ ಮುಂದುವರಿಸಿದರು.
ಈ ಸಂಬಂಧ ಅಭಿಪ್ರಾಯ ಹೇಳಲು ಡಾ. ಭಾವ್ನಾ ಮೆಹ್ತಾ ಮಾಧ್ಯಮದವರಿಗೆ ಸಿಕ್ಕಿಲ್ಲ.
“ಪ್ರೊಫೆಸರ್ ಮೀನೈ ಕಮ್ಯೂನಿಸ್ಟರು, ಭಾರತ ವಿರೋಧಿ ಹೇಳಿಕೆ ನೀಡುವವರು. ಆರೆಸ್ಸೆಸ್ ನ ಹಿರಿಯರಾಗಿದ್ದ ನಾನಾಜಿ ದೇಶಮುಖ್ ವಿರುದ್ಧವೂ ಅವರು ಹೇಳಿಕೆ ನೀಡಿದ್ದರು. ಆ ವಿಷಯದಲ್ಲಿ ಮಾತನಾಡಲು ಗುಜರಾತಿನಲ್ಲಿ ಸಂಘಟಕರಿಗೆ ಯಾರೂ ವಿದ್ವಾಂಸರು ಯಾಕೆ ಸಿಗಲಿಲ್ಲ? ಭಾರತ ವಿರೋಧಿ ಭಾವನೆಯವರನ್ನು ಎಬಿವಿಪಿ ಎಂದಿಗೂ ಸಹಿಸಿಕೊಳ್ಳುವುದಿಲ್ಲ” ಎಮ್ ಎಸ್ ಯು ಎಬಿವಿಪಿ ಘಟಕದ ಅಧ್ಯಕ್ಷ ಧ್ರುವ ಪ್ರಕಾಶ್ ಹೇಳಿದರು.