ನವದೆಹಲಿ : ಸುದ್ದಿ ವಾಹಿನಿಗಳು ಸತ್ಯವನ್ನು ಹೇಳುತ್ತಿಲ್ಲ, ಹೀಗಾಗಿ ಅಂತಹ ಮಾಧ್ಯಮಗಳಲ್ಲಿ ನಾನು ಮುಂದುವರೆಯುವುದಿಲ್ಲ ಎಂದು ಹಿರಿಯ ಪತ್ರಕರ್ತರೊಬ್ಬರು ರೈತ ಹೋರಾಟದ ವೇದಿಕೆಯಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ ಘಟನೆ ನಡೆದಿದೆ. ಇಂದು ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆಯುತ್ತಿದ್ದ ರೈತರ ಮಹಾಪಂಚಾಯತ್ ನಲ್ಲಿ ವೇದಿಕೆಯೇರಿ ಮಾತನಾಡಿದ ಎಬಿಪಿ ಚಾನೆಲ್ ನ ಹಿರಿಯ ವರದಿಗಾರ ರಕ್ಷಿತ್ ಸಿಂಗ್, ವೇದಿಕೆಯಲ್ಲೇ ತನ್ನ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.
“ಸುದ್ದಿ ವಾಹಿನಿಗಳು ಸತ್ಯವನ್ನು ನಿಜವಾದ ಸುದ್ದಿಯನ್ನು ತೋರಿಸುವುದನ್ನು ನಿಲ್ಲಿಸಿವೆ. ಅವು ಕೇವಲ ಸುಳ್ಳು ಹೇಳುತ್ತಿವೆ. ಸತ್ಯವನ್ನು ತೋರಿಸದಿರುವುದ ಸಹ ಸುಳ್ಳಿಗೆ ಸಮ ಮತ್ತು ನಾನು ಈ ಸುಳ್ಳಿಗೆ ವಿರೋಧಿಯಾಗಿದ್ದೇನೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ” ಎಂದು ರಕ್ಷಿತ್ ಘೋಷಿಸಿದರು.
“ನನಗೆ 4 ವರ್ಷದ ಮಗು ಇದೆ. ಅವನು ದೊಡ್ಡವನಾದಾಗ, 20 ವರ್ಷ ವಯಸ್ಸಿನವನಾದಾಗ ಇವತ್ತಿನ ಅಘೋಷಿತ ತುರ್ತು ಪರಿಸ್ಥಿತಿಯ ಸಂದರ್ಭ ನೀನೆಲ್ಲಿದ್ದೆ ಎಂದು ಕೇಳಿದರೆ, ನಾನು ಸತ್ಯ ಮತ್ತು ರೈತರೊಂದಿಗಿದ್ದೆ ಎಂದು ಹೇಳಬಹುದು” ಎಂದು ರಕ್ಷಿತ್ ಇದೇ ವೇಳೆ ಹೇಳಿದರು.
ರಕ್ಷಿತ್ ಅವರು ರೈತರ ಹೋರಾಟವನ್ನು ಬೆಂಬಲಿಸಿ ರಾಜೀನಾಮೆ ನೀಡಿರುವುದಕ್ಕೆ ಮತ್ತು ರೈತ ಹೋರಾಟದ ಭಾಗವಾಗಿದ್ದಕ್ಕೆ ಟ್ವಿಟರ್ ನಲ್ಲಿ ದೊಡ್ಡ ಮಟ್ಟದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.