ಬೇಧಭಾವ, ಅಸಮಾನತೆಯ ಅಡಿಪಾಯದ ಮೇಲೆ ನಿಂತಿರುವ ಬಿಜೆಪಿಗರಿಂದ ಖರ್ಗೆ ಮೈ ಬಣ್ಣದ ಬಗೆಗಿನ ಹೇಳಿಕೆ ನಿರೀಕ್ಷಿತ : ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಬೇಧಭಾವ ಮತ್ತು ಅಸಮಾನತೆಯ ಅಡಿಪಾಯದ ಮೇಲೆ ನಿಂತಿರುವ ಬಿಜೆಪಿಗರಿಂದ ಖರ್ಗೆ ಮೈ ಬಣ್ಣದ ಬಗೆಗಿನ ಹೇಳಿಕೆ ನಿರೀಕ್ಷಿತ ಎಂದು  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಹೇಳಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬಿಜೆಪಿ ಮತ್ತು ಆರ್.ಎಸ್.ಎಸ್. ಮೂಲ ಸಿದ್ದಾಂತವೇ ಬೇಧಭಾವ ಮತ್ತು ಅಸಮಾನತೆಯನ್ನು ಪೋಷಿಸುವ ಯೋಚನೆಗಳ ಅಡಿಪಾಯದ ಮೇಲೆ ನಿಂತಿದೆ. ಹಾಗಾಗಿ ಅವರು ಇತರರ ಜಾತಿ, ಚರ್ಮದ ಬಣ್ಣ, ಆಹಾರ ಪದ್ಧತಿಗಳ ವಿಚಾರದಲ್ಲಿ ವಿಕೃತಿ ಮೆರೆಯುತ್ತಲೇ ಇರುತ್ತಾರೆ. ಅದರ ಭಾಗವಾಗಿಯೇ ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರಿಂದ ಮಲ್ಲಿಕಾರ್ಜುನ ಖರ್ಗೆ ಅವರ ಮೈ ಬಣ್ಣದ ಬಗೆಗಿನ ಅಂತರಾಳದ ಮಾತುಗಳು ಹೊರಬಂದಿವೆ ಎಂದು ತಿಳಿಸಿದ್ದಾರೆ.

ಅರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಖಂಡಿಸಿದ ಮಜೀದ್ ಅವರು ತಕ್ಷಣ ಅವರ ವಿರುದ್ಧ ಎಸ್.ಸಿ, ಎಸ್.ಟಿ ಅಟ್ರಾಸಿಟಿ ಕಾಯಿದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

- Advertisement -

ಅರಗ ಅವರ ಹೇಳಿಕೆ ಕೇವಲ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಅಥವಾ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ಬಗ್ಗೆಯೋ ಅಥವಾ ಉತ್ತರ ಕರ್ನಾಟಕದ ಜನರ ದೈಹಿಕ ರಚನೆ ಮತ್ತು ಅಲ್ಲಿನ ಪರಿಸರದ ಬಗ್ಗೆ ಮಾತ್ರವಲ್ಲ, ಬದಲಿಗೆ ಈ ದೇಶದ ಮೂಲನಿವಾಸಿಗಳ ಮೈಬಣ್ಣವನ್ನು ಇಡಿಯಾಗಿ ಅವರು ತುಚ್ಛವಾಗಿ ಮಾತನಾಡಿದ್ದಾರೆ ಎಂದು ಮಜೀದ್ ಆರೋಪಿಸಿದರು.

ಬಿಜೆಪಿಯವರ ಈ ರೀತಿಯ ವರ್ತನೆಗಳಿಂದ ಬೇಸತ್ತ ರಾಜ್ಯದ ಜನರು ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದರೂ ಇನ್ನೂ ಅವರಿಗೆ ಬುದ್ದಿ ಬಂದಿಲ್ಲ. ಕಾಂಗ್ರೆಸ್ ಕೇವಲ ವಿಷಾದ ಅಥವಾ ಕ್ಷಮೆಗೆ ತೃಪ್ತಿಪಟ್ಟುಕೊಳ್ಳದೆ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

Join Whatsapp