ಮಾಡಾಳ್ ಲಂಚ ಪ್ರಕರಣ| ಬೊಮ್ಮಾಯಿ ಸರ್ಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯುವ ನೈತಿಕತೆ ಇಲ್ಲ: ಅಬ್ದುಲ್ ಮಜೀದ್ ಮೈಸೂರು

Prasthutha|

ಬೆಂಗಳೂರು: ತಮ್ಮ ಮೇಲೆ 40% ಕಮಿಷನ್ ಕೆಸರು ಮೆತ್ತಿಕೊಂಡಿದ್ದರೂ, ಸಾಕ್ಷಿಗಳೆಲ್ಲಿ? ಎಂಬ ಕುಂಟು ನೆಪದ ಹಿಂದೆ ರಕ್ಷಣೆ ಪಡೆದಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅವರ ಶಾಸಕ ಮಾಡಾಳ್ ಮತ್ತು ಅವರ ಪುತ್ರನ ಲಂಚ ಪ್ರಕರಣ ಉತ್ತರವಾಗಿ ಹೊರಬಂದಿದೆ. ಈ ಪ್ರಕರಣ ಭ್ರಷ್ಟ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಆಳ ಅಗಲವನ್ನು ನಿಸ್ಸಂದೇಹವಾಗಿ ನಿರೂಪಿಸುತ್ತದೆ. ಈ ಸರ್ಕಾರಕ್ಕೆ ಒಂದೇ ಒಂದು ಕ್ಷಣವು ಅಧಿಕಾರದಲ್ಲಿ ಉಳಿಯುವ ನೈತಿಕತೆ ಇಲ್ಲ. ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ಕೊಟ್ಟು ವಿಧಾನಸಭೆಯನ್ನು ವಿಸರ್ಜಿಸಿ ಜನರ ಮುಂದೆ ಹೋಗುವ ಧೈರ್ಯ ತೋರಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ಸವಾಲು ಹಾಕಿದ್ದಾರೆ.

- Advertisement -

ಚೆನ್ನಗಿರಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಪ್ರಕರಣ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಯಾವ ರೀತಿ ಯೋಜಿತ ರೀತಿಯಲ್ಲಿ ಅಳವಡಿಸಿಕೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ಪ್ರಕರಣವನ್ನು ಬಯಲಿಗೆಳದ ಲೋಕಾಯುಕ್ತ ಸಂಸ್ಥೆಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನರ ನಡುವೆ ಕೋಮು ದ್ವೇಷ ಬಿತ್ತಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ವಿಫಲತೆ ಕಾಣುತ್ತಿರುವ ಹೊತ್ತಿನಲ್ಲಿ ಲಂಚದ ರೂಪದಲ್ಲಿ ರಾಜ್ಯವನ್ನು ಲೂಟಿ ಮಾಡಿದ ಹಣದಿಂದ ಮತದಾರರನ್ನು ಖರೀದಿಸುವ ನೀಚ ಯೋಜನೆಯ ಭಾಗವಾಗಿ ರಾಜ್ಯ ಇಂದು ದೇಶದಲ್ಲಿ ಅತ್ಯಂತ ಭ್ರಷ್ಟ ರಾಜ್ಯವಾಗಿ ಅಪಕೀರ್ತಿಗೆ ಒಳಗಾಗಿದೆ. ಸರ್ಕಾರದ ಪ್ರತಿ ಇಲಾಖೆಯಲ್ಲೂ ಕೂಡ ಲಂಚ, ಲಂಚ, ಲಂಚ. ಲಂಚವಲ್ಲದೆ ಬೇರೇನೂ ಕಾಣುವುದಿಲ್ಲ ಎಂದು ಮಜೀದ್ ಅವರು ತಮ್ಮ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

- Advertisement -

ಪಿಎಸ್ಐ ನೇಮಕಾತಿ, ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ. ಪ್ರತಿಯೊಂದು ಇಲಾಖೆಯ ಪ್ರತಿಯೊಂದು ಯೋಜನೆಯಲ್ಲೂ 40 ಪರ್ಸೆಂಟ್ ಕಮಿಷನ್. ರಾಜ್ಯಾದ್ಯಂತ ಪ್ರತಿಯೊಂದು ಕಾಮಗಾರಿಯಲ್ಲೂ ಕಳಪೆ ಗುಣಮಟ್ಟದ ಕೆಲಸ. ರಾಜ್ಯ ಬಿಜೆಪಿ ಸರ್ಕಾರದ ಅನಾಚಾರಗಳನ್ನು ಪಟ್ಟಿ ಮಾಡಿದಷ್ಟು ಇನ್ನಷ್ಟು ಬೆಳೆಯುತ್ತಲೇ ಹೋಗುತ್ತದೆ. ಇಷ್ಟು ಭ್ರಷ್ಟ ಸರ್ಕಾರವನ್ನು ನಮ್ಮಿಂದ ಊಹಿಸಲು ಸಾಧ್ಯವಿಲ್ಲ. ಆದರೆ ಲಜ್ಜೆಯ ಎಲ್ಲಾ ಗಡಿಗಳನ್ನು ಮೀರಿರುವ ಬೊಮ್ಮಾಯಿ ನೇತೃತ್ವದ ಭ್ರಷ್ಟ ಸರ್ಕಾರ ಊಹೆ ಮೀರಿದ ಮಟ್ಟದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿ ಈ ಸರ್ಕಾರವನ್ನು ವಜಾ ಮಾಡುವ ಮೂಲಕವಾದರೂ ರಾಜ್ಯವನ್ನು ಈ ಹಗಲು ದರೋಡೆಯಿಂದ ತಡೆಯಬೇಕೆಂದು ಅವರು ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp