ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕೆಳಹಂತದ ಸಿಬ್ಬಂದಿಯ ವಿರುದ್ಧ ಕೈಗೊಳ್ಳಲಾಗುವ ಶಿಸ್ತು ಕ್ರಮಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಇರುವ ಅವಕಾಶವನ್ನು ಕಸಿಯಲು ಬಿಜೆಪಿ ಸರ್ಕಾರ ಮುಂದಾಗಿದೆ. ಈ ಹೊಸ ನಿಯಮವನ್ನು ನಾವು ವಿರೋಧಿಸುತ್ತೇವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದ್ದಾರೆ.
ಈ ಹಿಂದೆ ಪೊಲೀಸ್ ಪೇದೆ ಅಥವಾ ಇನ್ಸ್ ಪೆಕ್ಟರ್ ವಿರುದ್ಧ ಡಿಎಸ್ಪಿ ಹಂತದ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಂಡಾಗ ಅದರ ವಿರುದ್ಧ ಆರೋಪಿತ ಸಿಬ್ಬಂದಿ ಐಜಿ ಅಥವಾ ಎಸ್ಪಿ ಅವರಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿತ್ತು. ಆದರೆ ಆ ನಿಯಮಕ್ಕೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರ, ಶಿಸ್ತು ಕ್ರಮಕ್ಕೆ ಒಳಗಾದ ಸಿಬ್ಬಂದಿ ಕೋರ್ಟ್ ಮೊರೆ ಹೋಗಬೇಕು ಎಂಬ ಹೊಸ ನಿಯಮವನ್ನು ತರಲು ಮುಂದಾಗಿದೆ. ಇದೊಂದು ಸರ್ವಾಧಿಕಾರಿ ಧೋರಣೆಯಾಗಿದ್ದು, ಆಂತರಿಕ ಪ್ರಜಾಪ್ರಭುತ್ವ ನಾಶ ಮಾಡುವ ಬಿಜಿಪಿಯ ಕೋಮುವಾದಿ ಫಾಸಿಸ್ಟ್ ಮನಸ್ಥಿತಿಯ ಅನಾವರಣವಾಗಿದ್ದು ಇದನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ನಿಯಮದ ಅನುಸಾರ ಹೋದರೆ ಶಿಸ್ತು ಕ್ರಮಕ್ಕೆ ಒಳಗಾದ ವ್ಯಕ್ತಿ ಕೋರ್ಟ್ ಮೊರೆ ಹೋಗಿ ನ್ಯಾಯ ಪಡೆಯಬೇಕಾಗುತ್ತದೆ. ಅದು ಅತ್ಯಂತ ನಿಧಾನಗತಿಯ ಮತ್ತು ಆರ್ಥಿಕವಾಗಿ ತ್ರಾಸದಾಯಕ ಪ್ರಕ್ರಿಯೆಯಾಗಿರುತ್ತದೆ. ಇಷ್ಟು ದಿನ ಜನರ ವಿರುದ್ಧ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಬಿಜೆಪಿ ಸರ್ಕಾರ, ಈಗ ಹೊಸ ನಿಯಮ ಮಾಡಿ ಪೊಲೀಸರ ಮೇಲೆಯೇ ದೌರ್ಜನ್ಯ ಎಸಗಲು ಮುಂದಾಗಿದೆ ಎಂದು ಟೀಕಿಸಿದರು.
ಈ ಉದ್ದೇಶಿತ ನಿಯಮದ ವಿರುದ್ಧ ಪೋಲಿಸ್ ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರ ನಿಲುವಿಗೆ ಎಸ್ ಡಿಪಿಐ ಪಕ್ಷದ ನೈತಿಕ ಬೆಂಬಲ ಇದೆ. ಸರ್ಕಾರ ಈ ನಿಯಮವನ್ನು ಜಾರಿ ಮಾಡಿದರೆ ಪಕ್ಷ ಹೋರಾಟಕ್ಕೆ ಮುಂದಾಗಲಿದೆ ಎಂದು ಮಜೀದ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.