ಯಡಿಯೂರಪ್ಪ ವಿರುದ್ಧ ಹೋರಾಟ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಸೆಳೆಯಲು ಮುಂದಾದ ಆಪ್

Prasthutha|

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರ ವಿರುದ್ಧ ಹೋರಾಟ ನಡೆಸಿ ಗಮನ ಸೆಳೆದಿರುವ ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಅವರನ್ನು ಸೆಳೆಯಲು ಆಮ್ ಆದ್ಮಿ ಪಕ್ಷ ಮುಂದಾಗಿದೆ. ಭ್ರಷ್ಟಾಚಾರದ ವಿರುದ್ಧ ತನ್ನದೇ ಆದ ರೀತಿಯಲ್ಲಿ ಹೋರಾಟ ಮಾಡುತ್ತಿರುವ ಆಲಂ ಪಾಷಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಮ್ ಆದ್ಮಿ ಪಕ್ಷ ವೇದಿಕೆ ಸಜ್ಜುಗೊಳಿಸಿದೆ.

- Advertisement -


ಸಾಮಾಜಿಕ ಹೋರಾಟ ಮಾಡುತ್ತಿರುವ ಆಲಂ ಪಾಷ ರಾಜಕೀಯ ಚಟುವಟಿಯಿಂದ ದೂರವೇ ಉಳಿದಿದ್ದರು. ಹೋರಾಟದ ಮೂಲಕ ಹೆಸರುಗಳಿಸಿರುವ ಆಲಂ ಪಾಷ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅಲ್ಪಸಂಖ್ಯಾತ ಸಮುದಾಯವನ್ನು ಆಕರ್ಷಿಸಲು ಆಪ್ ನಿರ್ಧರಿಸಿದೆ.
ಈಗಾಗಲೇ ಪಾಷಾ ಅವರನ್ನು ಆಮ್ ಆದ್ಮಿ ಪಕ್ಷದ ಮುಖಂಡರು ಭೇಟಿ ಮಾಡಿ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಕರ್ನಾಟಕದ ಉಸ್ತುವಾರಿ ದಿಲೀಪ್ ಪಾಂಡೆ ಆಲಂ ಪಾಷ ಜೊತೆ ಚರ್ಚಿಸಿದ್ದಾರೆ.


ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಶಾಸಕ ಹಾಗೂ ಕರ್ನಾಟಕ ಉಸ್ತುವಾರಿ ಆಗಿರುವ ದಿಲೀಪ್ ಪಾಂಡೆ ಆಲಂ ಪಾಷ ಅವರನ್ನು ಸೆಳೆಯಲು ಸಾಕಷ್ಟು ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಆಲಂ ಪಾಷ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಪಕ್ಷಕ್ಕೂ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ವಕ್ಫ್ ಆಸ್ತಿ ಕಬಳಿಸಿರುವ ಬಹುತೇಕ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿರುವ ಆಲಂ ಪಾಷ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ನಿರ್ಣಾಯಕ ಹೋರಾಟ ಮಾಡುತ್ತಿದ್ದಾರೆ. ಐಎಂಎ ಹಗರಣದಲ್ಲಿ ಸಂತ್ರಸ್ತ ಮುಸ್ಲಿಮರಿಗೆ ಕಾನೂನು ನೆರವು ಜೊತೆಗೆ ಹೆಲ್ಪಿಂಗ್ ಸಿಟಿಜನ್ ಹೆಸರಿನ ಎನ್ ಜಿಒ ಸ್ಥಾಪಿಸಿ, ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿ ಹೋರಾಟ ನಡೆಸುತ್ತಿದ್ದಾರೆ.

- Advertisement -


ದಿಲೀಪ್ ಪಾಂಡೆ ಅವರ ಜೊತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಆಲಂ ಪಾಷ ರಾಜಕೀಯ ವಾತಾವರಣ ಕಲುಷಿತಗೊಂಡಿದ್ದು, ಉತ್ತಮ ಹಿನ್ನೆಲೆಯವರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆಪರೇಷನ್ ಕಮಲ, ಆಪರೇಷನ್ ಹಸ್ತ ಎಂದು ಶಾಸಕರನ್ನು ಖರೀದಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತದೆ. ಆಮ್ ಆದ್ಮಿ ಪಕ್ಷದಿಂದ ಉತ್ತಮ ರಾಜಕೀಯ ಸಂಸ್ಕೃತಿ ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ.



Join Whatsapp