ಕೇಸರಿ ಧ್ವಜ ವಿವಾದ: ಈಶ್ವರಪ್ಪ ಹೇಳಿಕೆಗೆ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕಿಡಿ

Prasthutha|

ನವದೆಹಲಿ: ಕೇಸರಿ ಧ್ವಜವನ್ನು ರಾಷ್ಟ್ರಧ್ವಜ ಮಾಡಲಾಗುತ್ತದೆ ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದು, ಈಶ್ವರಪ್ಪನವರಂತಹ ಕೋಮುವಾದಿ ರಾಜಕಾರಣಿಗಳು ಇಡೀ ದೇಶಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ.

- Advertisement -

ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಂಜಯ್ ಸಿಂಗ್, “ಬಿಜೆಪಿಯು ತ್ರಿವರ್ಣಧ್ವಜ ವಿರೋಧಿ ಪಕ್ಷ ಎಂಬುದು ಈಶ್ವರಪ್ಪನವರ ಹೇಳಿಕೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಆರೆಸ್ಸೆಸ್ ಸ್ಥಾಪನೆಯಾಗಿ ಹಲವು ವರ್ಷಗಳಾದರೂ ಅದು ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ. ಕೇವಲ ಕೇಸರಿ ಧ್ವಜವನ್ನು ಮಾತ್ರ ಗೌರವಿಸುವುದಾಗಿ ಅದು ಉದ್ಧಟತನ ತೋರುತ್ತಿತ್ತು. ಅಂತಹ ಆರೆಸ್ಸೆಸ್ ಹೇಳಿದಂತೆ ಆಡಳಿತಾರೂಢ ಬಿಜೆಪಿ ಕೇಳುತ್ತಿದ್ದು, ಇದರಿಂದಾಗಿ ರಾಷ್ಟ್ರಧ್ವಜಕ್ಕೆ ಅಪಮಾನವಾಗುತ್ತಿದೆ” ಎಂದು ಹೇಳಿದರು.

“ದೇಶದ ಜನತೆ ಗೌರವಿಸುವ ಹಾಗೂ ಸಂವಿಧಾನದಲ್ಲಿ ಗೌರವಯುತ ಸ್ಥಾನ ಪಡೆದಿರುವ ರಾಷ್ಟ್ರಧ್ವಜವನ್ನು ಅಪಮಾನಿಸಿದ್ದಕ್ಕೆ ಕೆ.ಎಸ್.ಈಶ್ವರಪ್ಪ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕು ಹಾಗೂ ಅವರನ್ನು ಶೀಘ್ರ ಬಂಧಿಸಬೇಕು. ಈ ಮೂಲಕ ರಾಷ್ಟ್ರಧ್ವಜಕ್ಕಿರುವ ಘನತೆಯನ್ನು ಕರ್ನಾಟಕದ ಬಿಜೆಪಿ ಸರ್ಕಾರ ಕಾಪಾಡಬೇಕು. ಶೇ. 40% ಕಮಿಷನ್ ಪ್ರಕರಣದಲ್ಲಿ ಸಚಿವಸ್ಥಾನ ಕಳೆದುಕೊಂಡಿರುವ ವ್ಯಕ್ತಿಯು ಕಾನೂನಿನ ಭಯವಿಲ್ಲದೇ ಹೇಳಿಕೆ ನೀಡುತ್ತಿರುವುದು ಖಂಡನೀಯ. ಈಶ್ವರಪ್ಪನವರ ವಿರುದ್ಧ ದೆಹಲಿಯ ನಾರ್ಥ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಸಂಜಯ್ ಸಿಂಗ್ ತಿಳಿಸಿದರು.

Join Whatsapp