ಶಾಲಾ ಶುಲ್ಕಕ್ಕಾಗಿ ಕಿರುಕುಳ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ರಕ್ಷಣೆಗೆ ಎಎಪಿಯಿಂದ ಸಹಾಯವಾಣಿ

Prasthutha|

ಬೆಂಗಳೂರು: ಖಾಸಗಿ ಶಾಲೆಗಳಿಂದ ಕಿರುಕುಳ ಅನುಭವಿಸುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಪೋಷಕರ ನೆರವಿಗಾಗಿ ಆಮ್‌ ಆದ್ಮಿ ಪಾರ್ಟಿಯು ಸಹಾಯವಾಣಿ ಆರಂಭಿಸಿದ್ದು, ತೊಂದರೆಗೆ ಒಳಗಾದವರು 7292022063 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಎಎಪಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ  ಹೇಳಿದರು.

- Advertisement -

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ಅವರು, “ಶೇ. 70ರಷ್ಟು ಶುಲ್ಕ ಕಟ್ಟಿದ್ದರೆ ಸಾಕು ಎಂಬ ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳು ಕಿಮ್ಮತ್ತು ನೀಡುತ್ತಿಲ್ಲ. ಪೂರ್ತಿ ಶುಲ್ಕ ಕಟ್ಟದಿದ್ದರೆ ಪ್ರವೇಶಪತ್ರ ಕೊಡುವುದಿಲ್ಲ, ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿವೆ. ಆದರೂ ಸರ್ಕಾರ ಅಂತಹ ಶಾಲೆಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಶುಲ್ಕ ದಂಧೆಯಲ್ಲಿ ಸರ್ಕಾರ ಕೂಡ ಶಾಮೀಲಾಗಿದ್ದು, ಕಿಕ್‌ ಬ್ಯಾಕ್‌ ಆಸೆಗಾಗಿ ಜಾಣ ಕುರುಡು ಪ್ರದರ್ಶಿಸುತ್ತಿದೆ. ಸರ್ಕಾರಕ್ಕೆ ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಪರೀಕ್ಷಾ ಶುಲ್ಕ ಹಾಗೂ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿ ಕೂಡಲೇ ಸುತ್ತೋಲೆ ಹೊರಡಿಸಲಿ” ಎಂದು ಆಗ್ರಹಿಸಿದರು.

ನಾಡಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳ ಪರ ಆಮ್‌ ಆದ್ಮಿ ಪಾರ್ಟಿಯಿದೆ. ಕಿರುಕುಳ ಅನುಭವಿಸುತ್ತಿರುವ ವಿದ್ಯಾರ್ಥಿಗಳು ಅಥವಾ ಪೋಷಕರು ನಮ್ಮ ಸಹಾಯವಾಣಿ 7292022063 ಸಂಖ್ಯೆಗೆ ಕರೆ ಮಾಡಬಹುದು. ತಕ್ಷಣವೇ ನಮ್ಮ ಕಾರ್ಯಕರ್ತರು ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ನೀಡಿ ನ್ಯಾಯಕ್ಕಾಗಿ ಆಗ್ರಹಿಸಲಿದ್ದಾರೆ. ವಿದ್ಯಾರ್ಥಿಗಳ ಹಾಗೂ ಪೋಷಕರ ನೋವಿಗೆ ಸ್ಪಂದಿಸಲಿದ್ದಾರೆ. ಶಿಕ್ಷಣ ಸಚಿವರು ಹಾಗೂ ಖಾಸಗಿ ಶಾಲೆಗಳು ಜಂಟಿಯಾಗಿ ನಡೆಸುತ್ತಿರುವ ಈ ದಂಧೆಯನ್ನು ನೋಡಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಮೋಹನ್‌ ದಾಸರಿಯವರು ಹೇಳಿದರು.

- Advertisement -

ಕೇಂದ್ರ ಸರ್ಕಾರವೇ 10 ಹಾಗೂ 12ನೇ ತರಗತಿಯ ಸಿಬಿಎಸ್‌ಇ ಪರೀಕ್ಷೆಯನ್ನು ಮುಂದೂಡಿದೆ. ಅಲ್ಲದೇ, ಪರೀಕ್ಷೆ ಹಾಗೂ ಶುಲ್ಕಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ. ಪರಿಸ್ಥಿತಿ ಹೀಗಿದ್ದರೂ ರಾಜ್ಯ ಸರ್ಕಾರವು ಪರೀಕ್ಷೆ ನಡೆಸುತ್ತಿರುವುದಕ್ಕೆ ಶಾಲೆಗಳು ನೀಡುವ ಕಿಕ್‌ಬ್ಯಾಕ್‌ ಕಾರಣ. ಶುಲ್ಕ ದಂಧೆಗೆ ನ್ಯಾಯಾಲಯವು ಕಡಿವಾಣ ಹಾಕಬಹುದು ಎಂಬ ಭಯದಿಂದ ತೀರ್ಪಿಗೂ ಮುನ್ನವೇ ಪರೀಕ್ಷೆ ನಡೆಸಲು ಸರ್ಕಾರ ತರಾತುರಿಯಲ್ಲಿ ಮುಂದಾಗಿದೆ ಎಂದು ಮೋಹನ್‌ ದಾಸರಿಯವರು ಟೀಕಿಸಿದರು.

ಪರೀಕ್ಷೆಗೂ ಮುನ್ನ ಲಸಿಕೆ ನೀಡಿ:

ಪಕ್ಷದ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ರವರು ಮಾತನಾಡಿ, “ಪರೀಕ್ಷೆಗೂ ಕನಿಷ್ಠ ಎರಡು ವಾರ ಮುನ್ನವೇ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಎಂದು ಆಮ್‌ ಆದ್ಮಿ ಪಾರ್ಟಿಯು ಎರಡು ತಿಂಗಳಿನಿಂದ ಆಗ್ರಹಿಸುತ್ತಿದೆ. ಆದರೆ ಇದು ಕಿವುಡ, ಕುರುಡ, ಮೂಗ ಸರ್ಕಾರ. ಇದಕ್ಕೆ ನಮ್ಮ ಆಗ್ರಹ ಕೇಳಿಸುವುದಿಲ್ಲ, ವಿದ್ಯಾರ್ಥಿಗಳ ಸಮಸ್ಯೆ ಕಾಣಿಸುವುದಿಲ್ಲ, ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಖಾಸಗಿ ಶಾಲೆಗಳು ನಿಯಮ ಮೀರಿ ಶುಲ್ಕ ವಸೂಲಿ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಆದರೆ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಈಗಲೂ ಕಾಲ ಮಿಂಚಿಲ್ಲ. ತಕ್ಷಣವೇ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ, ನಂತರವಷ್ಟೇ ಪರೀಕ್ಷೆ ನಡೆಸಲಿ” ಎಂದು ಆಗ್ರಹಿಸಿದರು.



Join Whatsapp