ಪರಿಶಿಷ್ಟರಿಗಾಗಿ ಟೂಲ್ ಕಿಟ್ ಖರೀದಿ ಹಗರಣ: ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಲೋಕಾಯುಕ್ತಕ್ಕೆ ಎಎಪಿ ದೂರು

Prasthutha|

ಬೆಂಗಳೂರು: ಕೈಗಾರಿಕಾ ತರಬೇತಿ ಕೇಂದ್ರದ ಎಸ್ ಸಿ-ಎಸ್ ಟಿ ವಿದ್ಯಾರ್ಥಿಗಳಿಗೆ ವಿತರಿಸುವ ಟೂಲ್ ಕಿಟ್ ಖರೀದಿ ಹಗರಣಕ್ಕೆ ಸಂಬಂಧಿಸಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ವಿರುದ್ಧ ಆಮ್ ಅದ್ಮಿ ಪಾರ್ಟಿ ನಿಯೋಗವು ಲೋಕಾಯುಕ್ತರಿಗೆ ದಾಖಲೆ ಸಹಿತ ದೂರು ಸಲ್ಲಿಸಿತು.

- Advertisement -

ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ರವರಿಗೆ ದೂರು ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ಸಲಕರಣೆಗಳನ್ನು ಒಳಗೊಂಡ ಟೂಲ್ ಕಿಟ್ ಗಳನ್ನು ಖರೀದಿಸುವ ಗುತ್ತಿಗೆಯಲ್ಲಿ ಭಾರೀ ಅಕ್ರಮ ನಡೆದಿದೆ. ಇದನ್ನು ಆಮ್ ಆದ್ಮಿ ಪಾರ್ಟಿಯು ಬಯಲು ಮಾಡಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದರೂ, ರಾಜ್ಯ ಸರ್ಕಾರವು ಈ ಹಗರಣದ ಕುರಿತು ಯಾವುದೇ ತನಿಖೆಗೆ ಆದೇಶಿಸಿಲ್ಲ. ಹಗರಣದ ಕಿಂಗ್ ಪಿನ್ ಆಗಿರುವ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣರವರನ್ನು ರಾಜ್ಯ ಸರ್ಕಾರ ರಕ್ಷಿಸುತ್ತಿರುವುದು ಖಂಡನೀಯ” ಎಂದು ಹೇಳಿದರು.

“ಟೆಂಡರ್‌ನಲ್ಲಿ ಭಾಗವಹಿಸಿದ್ದ ಇಂಟಲೆಕ್ ಸಿಸ್ಟಮ್ಸ್ ಸಂಸ್ಥೆಯು ಇಲಾಖೆಗೆ ನಕಲಿ ದಾಖಲೆಗಳನ್ನು ನೀಡಿ ತಾಂತ್ರಿಕ ಅನುಮೋದನೆ ಪಡೆದುಕೊಂಡಿದೆ. ಮಂತ್ರಿಗಳ ಪ್ರಭಾವದಿಂದಾಗಿ ಬೋಗಸ್ ಕಂಪನಿಗೆ 22 ಕೋಟಿ ರೂಪಾಯಿ ಮೊತ್ತದ ಸಾಮಗ್ರಿಗಳನ್ನು ಪೂರೈಸಲು ಅನುಮತಿ ನೀಡಿರುವುದು ರಾಜ್ಯ ಬಿಜೆಪಿ ಸರ್ಕಾರದ 40 % ಕಮಿಷನ್ ಭ್ರಷ್ಟಾಚಾರಕ್ಕೆ ಸ್ಪಷ್ಟ ಉದಾಹರಣೆ. ಮೊದಲ ಬಾರಿ ಟೆಂಡರ್ ಕರೆದಾಗ ಇದೇ ಕಂಪನಿಗೆ ತಾಂತ್ರಿಕ ಅರ್ಹತೆ ಇಲ್ಲದ ಕಾರಣಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಿ, ಮರು ಟೆಂಡರ್ ಕರೆದು ಈ ಕಂಪನಿಗೆ ಅನುವು ಮಾಡಿಕೊಡಲಾಗಿದೆ” ಎಂದು ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾಹಿತಿ ನೀಡಿದರು.

- Advertisement -

ಆಮ್ ಆದ್ಮಿ ಪಾರ್ಟಿಯ ರಾಜ್ಯ ವಕ್ತಾರ ಕೆ.ಮಥಾಯಿ ಮಾತನಾಡಿ, “ಇದೇ ಕಂಪನಿಯು ಈ ಹಿಂದೆ ಬೇರೆಯವರಿಗೆ 22 ಕೋಟಿ ರೂಪಾಯಿ ಹಾಗೂ 11 ಕೋಟಿ ರೂಪಾಯಿ ಮೊತ್ತದ ಸಾಮಗ್ರಿಗಳನ್ನು ಪೂರೈಸಿರುವ ಹಾಗೆ ಸೃಷ್ಟಿಸಿರುವ ಜಿಎಸ್ ಟಿ ಬಿಲ್ ಗಳು ಸಂಪೂರ್ಣ ನಕಲಿಯಾಗಿವೆ. ಜಿಎಸ್ ಟಿ ಮಂಡಳಿ ಕೂಡ ಇವು ನಕಲಿ ಬಿಲ್ ಎಂದು ರುಜುವಾತು ಪಡಿಸಿದ್ದರೂ ಇಲಾಖೆಯ ಕಾರ್ಯದರ್ಶಿಗಳು ಮತ್ತು ಮಂತ್ರಿಗಳು ಇದೇ ಕಂಪನಿಗೆ ಕೋಟ್ಯಂತರ ರೂ. ಮೊತ್ತದ ಗುತ್ತಿಗೆ ನೀಡಿದ್ದಾರೆ. ಲೋಕಾಯುಕ್ತ ನ್ಯಾ. ಪಾಟೀಲ್‌ರವರು ಸರ್ಕಾರದ ಒತ್ತಡಕ್ಕೆ ಮಣಿಯದೇ, ನಿಷ್ಪಕ್ಷಪಾತ ತನಿಖೆ ನಡೆಸಿ ಡಾ. ಅಶ್ವತ್ಥ್ ನಾರಾಯಣ್ ಹಾಗೂ ಎಲ್ಲ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಲೋಕಾಯುಕ್ತ ಭೇಟಿಯ ಸಂದರ್ಭದಲ್ಲಿ ರಾಜ್ಯ ವಕೀಲರ ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ , ರವಿಚಂದ್ರ ಎಸ್ ನೆರಬೆಂಚಿ , ಉಷಾ ಮೋಹನ್, ಪ್ರವೇಶ ಮತ್ತಿತರರು ಉಪಸ್ಥಿತರಿದ್ದರು.



Join Whatsapp