ನಿಷ್ಕ್ರಿಯ ಮಹಿಳಾ ಆಯೋಗದ ವಜಾಗೆ ಎಎಪಿ ಆಗ್ರಹ

Prasthutha|

ಬೆಂಗಳೂರು: ನಾಡಿನ ಮಹಿಳೆಯರ ರಕ್ಷಣೆಯಲ್ಲಿ ರಾಜ್ಯ ಮಹಿಳಾ ಆಯೋಗವು ಸಂಪೂರ್ಣ ವಿಫಲವಾಗಿದ್ದು, ಆಯೋಗದ ಈಗಿನ ಅಧ್ಯಕ್ಷರು ಹಾಗೂ ಸದಸ್ಯರನ್ನು ವಜಾ ಮಾಡಿ ನೂತನ ಆಯೋಗ ರಚಿಸಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದೆ.

- Advertisement -

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿಯ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲ ಸ್ವಾಮಿಯವರು, “ಮಹಿಳಾ ಆಯೋಗದ ಅಧ್ಯಕ್ಷರಾದ ಆರ್. ಪ್ರಮೀಳಾ ನಾಯ್ಡು ಹಾಗೂ ಸದಸ್ಯರು ಸರ್ಕಾರದ ಸೌಲಭ್ಯ ಪಡೆಯುವುದಕ್ಕೆ ಸೀಮಿತವಾಗಿದ್ದಾರೆ. ರಾಜ್ಯಾದ್ಯಂತ ಮಹಿಳೆಯರ ಮೇಲೆ ಕಿರುಕುಳ, ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯ ಕೂಡ ಆಯೋಗದ ಅಧ್ಯಕ್ಷರಿಗೆ ಇಲ್ಲ. ಪೊಲೀಸ್‌ ಇಲಾಖೆಯ ಮೇಲೆ ಹಿಡಿತ ಸಾಧಿಸುವುದರಲ್ಲಿ ಆಯೋಗ ವಿಫಲವಾಗಿದೆ. ರಾಜ್ಯದ ಜನತೆಗೆ ಆಯೋಗದ ಮೇಲೆ ವಿಶ್ವಾಸವೇ ಇಲ್ಲವಾಗಿದೆ” ಎಂದು ಹೇಳಿದರು.

ಪ್ರಮೀಳಾ ನಾಯ್ಡುರವರು ಆಯೋಗದ ಅಧ್ಯಕ್ಷರೋ ಅಥವಾ ಬಿಜೆಪಿಯ ಏಜೆಂಟರೋ ಎಂಬ ಅನುಮಾನ ಕಾಡುತ್ತಿದೆ. ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ, ಪ್ರಕರಣಗಳು ಜನರ ಗಮನಕ್ಕೆ ಬಂದು ಸರ್ಕಾರದ ಮಾನ ಬೀದಿ ಪಾಲಾಗುತ್ತದೆ ಎಂಬ ಕಾರಣಕ್ಕೆ ಅವರು ನಿಷ್ಕ್ರಿಯರಾಗಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ಸರಾಸರಿ ಒಂದಕ್ಕಿಂತ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಆಯೋಗ ನಿದ್ರಾವಸ್ಥೆಯಲ್ಲಿ ಇರುವುದು ಖಂಡನೀಯ. ಬಾಲ್ಯ ವಿವಾಹಗಳು ಎಗ್ಗಿಲ್ಲದೇ ನಡೆಯುತ್ತಿವೆ. ಕಾಟಾಚಾರಕ್ಕೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗುತ್ತಿದೆಯೇ ಹೊರತು, ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಕೋಟ್ಯಂತರ ಅನುದಾನ, ನಾನಾ ಸೌಲಭ್ಯಗಳನ್ನು ಆಯೋಗಕ್ಕೆ ನೀಡಿ ದುಂದುವೆಚ್ಚ ಮಾಡುವ ಮಾಡಲು ಆಯೋಗವನ್ನು ವಜಾ ಮಾಡಿ, ಮಹಿಳೆಯರ ಬಗ್ಗೆ ಕಾಳಜಿ ಹೊಂದಿರುವ ದಿಟ್ಟ ಮಹಿಳೆಯ ನೇತೃತ್ವದಲ್ಲಿ ನೂತನ ಆಯೋಗ ರಚಿಸಲಿ ಎಂದು ಕುಶಲ ಸ್ವಾಮಿಯವರು ಆಗ್ರಹಿಸಿದರು.

- Advertisement -

ಆಮ್‌ ಆದ್ಮಿ ಪಾರ್ಟಿಯ ಮಹಿಳಾ ಮುಖಂಡರಾದ ಉಷಾ ಮೋಹನ್‌ರವರು ಮಾತನಾಡಿ, “ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರವರ ಸರ್ಕಾರವು ಸ್ವಾತಿ ಮಾಲಿವಾಲ್‌ ಎಂಬ ದಿಟ್ಟ ಹೋರಾಟಗಾರ್ತಿಯನ್ನು ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ. ಕಳೆದ ಐದು ವರ್ಷಗಳಲ್ಲಿ ಅವರ ನೇತೃತ್ವದಲ್ಲಿ 1,00,672 ಪ್ರಕರಣಗಳಿಗೆ ಸಂಬಂಧಿಸಿ 1,42,234 ಜನರ ವೈಯಕ್ತಿಕ ವಿಚಾರಣೆ ನಡೆದಿದೆ. ಸಹಾಯವಾಣಿಗೆ ಕರೆ ಮಾಡಿ ಕಷ್ಟ ಹೇಳಿಕೊಂಡ ದೆಹಲಿಯ 4.25 ಲಕ್ಷ ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗಿದೆ. ದೆಹಲಿಯ ಮಹಿಳಾ ಆಯೋಗವು 250ಕ್ಕೂ ಶಿಫಾರಸ್ಸುಗಳು ಸರ್ಕಾರ ಹಾಗೂ ಪ್ರಾಧಿಕಾರಕ್ಕೆ ಕಳುಹಿಸಿದೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಸ್ವಾತಿ ಮಾಲಿವಾಲ್‌ರವರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ನಮ್ಮ ಕರ್ನಾಟಕದ ಮಹಿಳಾ ಆಯೋಗಕ್ಕೂ ಅಂತಹ ಅಧ್ಯಕ್ಷರ ಅಗತ್ಯವಿದೆ. ಮಹಿಳೆಯರ ಮೇಲೆ ದೌರ್ಜನ್ಯವಾದಾಗ ಜಾಣ ಕುರುಡು ತೋರುವ ಈಗಿನ ಅಧ್ಯಕ್ಷರಿಂದ ಮಹಿಳೆಯರಿಗೆ ಏನೂ ಉಪಯೋಗವಿಲ್ಲ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಈ ಬಗ್ಗೆ ಗಮನವಹಿಸಬೇಕು” ಎಂದು ಆಗ್ರಹಿಸಿದರು.



Join Whatsapp