ರೈಲ್ವೆ ಇಲಾಖೆಯ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸಲು ಎಎಪಿ ಆಗ್ರಹ

Prasthutha|

ಬೆಂಗಳೂರು: ರೈಲ್ವೆ ಇಲಾಖೆಯ ಉನ್ನತ ದರ್ಜೆಯ ಹುದ್ದೆಗಳಿಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡದಲ್ಲಿ ಕೂಡ ಪರೀಕ್ಷೆ ನಡೆಸಬೇಕು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಆಗ್ರಹಿಸಿದ್ದಾರೆ.

- Advertisement -

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ವಿ ಸದಂ, “ರೈಲ್ವೆ ಇಲಾಖೆಯ ಎಲ್ಲ ಪರೀಕ್ಷೆಗಳನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ನಡೆಸಲಾಗುತ್ತಿತ್ತು. ಕನ್ನಡಿಗರ ನಿರಂತರ ಹೋರಾಟದ ಫಲವಾಗಿ ಸಿ ಹಾಗೂ ಡಿ ದರ್ಜೆ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸಲಾಗುತ್ತಿದೆ. ಆದರೆ ಉನ್ನತ ದರ್ಜೆಗಳಾದ ಎ ಹಾಗೂ ಬಿ ದರ್ಜೆಗಳಿಗೆ ಈಗಲೂ ಕನ್ನಡದಲ್ಲಿ ಪರೀಕ್ಷೆಗಳು ನಡೆಯುತ್ತಿಲ್ಲ. ಇದಲ್ಲದೇ, ಸಿ ಹಾಗೂ ಡಿ ದರ್ಜೆಯ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕವಾಗಲೂ ಹಿಂದಿ ಬರಬೇಕೆಂಬ ನಿಯಮ ಮಾಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರವು ಕನ್ನಡಿಗ ಯುವಕರಿಗೆ ಭಾರೀ ಅನ್ಯಾಯ ಮಾಡುತ್ತಿದೆ” ಎಂದು ಹೇಳಿದರು.

“ಸಿ ಹಾಗೂ ಡಿ ದರ್ಜೆಯ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುತ್ತಿದ್ದರೂ, ಪ್ರಶ್ನೆಪತ್ರಿಕೆಯಲ್ಲಿ ಸಾಕಷ್ಟು ದೋಷವಿರುತ್ತದೆ. ಒಲ್ಲದ ಮನಸಿನಲ್ಲಿ ಕಾಟಾಚಾರಕ್ಕೆ ಕನ್ನಡ ಮಾಧ್ಯಮದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುತ್ತಿದೆ. ಹಿಂದಿಯಲ್ಲಿ ತಯಾರಿಸಿದ ಪ್ರಶ್ನೆಪತ್ರಿಕೆಗಳನ್ನು ಗೂಗಲ್ ಟ್ಯಾನ್ಸ್ಲೇಟ್ ಬಳಸಿ ಕನ್ನಡಕ್ಕೆ ಅನುವಾದ ಮಾಡಲಾಗುತ್ತಿದೆ. ಇದರಿಂದಾಗಿ ಪ್ರಶ್ನೆಗಳು ಸರಿಯಾಗಿ ಅರ್ಥವಾಗದೇ ಕನ್ನಡದ ಯುವಕರು ರೈಲ್ವೆ ಇಲಾಖೆಯ ಹುದ್ದೆಗಳಿಗೆ ನೇಮಕವಾಗುತ್ತಿಲ್ಲ” ಎಂದು ಜಗದೀಶ್ ವಿ ಸದಂ ಬೇಸರ ವ್ಯಕ್ತಪಡಿಸಿದರು.

- Advertisement -

“ಕೇವಲ ಹಿಂದಿ ಭಾಷಿಗರಿಗೆ ಮಾತ್ರ ಹೆಚ್ಚಿನ ಉದ್ಯೋಗಗಳು ಸಿಗಬೇಕೆಂಬ ದುರುದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಬಿಜೆಪಿ ಡಬಲ್ ಇಂಜಿನ್ ಸರ್ಕಾರಕ್ಕೆ ಕರ್ನಾಟಕ ಹಾಗೂ ಕನ್ನಡದ ಬಗ್ಗೆ ಸ್ವಲ್ಪವಾದರೂ ಕಾಳಜಿಯಿದ್ದರೆ, ರೈಲ್ವೆ ಇಲಾಖೆಯ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲಿ. ರಾಜ್ಯದ ಎಲ್ಲ ಬಿಜೆಪಿ ಶಾಸಕರು ಹಾಗೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಲಿ. ಕರ್ನಾಟಕದಲ್ಲಿನ ಎಲ್ಲ ರೈಲ್ವೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನಿಗದಿಪಡಿಸಲಿ. ಇಂತಹ ಕೆಲಸಗಳನ್ನು ಮಾಡದೇ ಕೇವಲ ಹಾಡು ಹೇಳಿಸುವ ಕಾರ್ಯಕ್ರಮ ಆಯೋಜಿಸುವುದರಿಂದ ಕನ್ನಡಿಗರಿಗೆ ಯಾವುದೇ ಲಾಭವಾಗದು” ಎಂದು ಜಗದೀಶ್ ವಿ ಸದಂ ಹೇಳಿದರು.

Join Whatsapp