ಶಾಲಾ ನಿರ್ವಹಣೆಗೆ ವಿದ್ಯಾರ್ಥಿಗಳ ಪೋಷಕರಿಂದ ಶುಲ್ಕ ವಸೂಲಿಗೆ ಆಮ್ ಆದ್ಮಿ ಪಾರ್ಟಿ ವಿರೋಧ

Prasthutha|

ಬೆಂಗಳೂರು: ಮುಖ್ಯಮಂತ್ರಿ ಹಾಗೂ ಸಚಿವರ 40% ಕಮಿಷನ್ ದಂಧೆಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿರುವುದರಿಂದ, ಶಿಕ್ಷಣ ಇಲಾಖೆಯು ಶಾಲಾ ಮಕ್ಕಳ ಪೋಷಕರಿಂದ ತಿಂಗಳಿಗೆ 100 ರೂಪಾಯಿ ಪಡೆಯುವ ಹಂತಕ್ಕೆ ತಲುಪಿದೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ  ಟೀಕಿಸಿದ್ದಾರೆ.

- Advertisement -

ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ , “ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಶೂಗಳನ್ನು ಖರೀದಿಸುವಂತೆ ರಾಜ್ಯ ಸರ್ಕಾರವು ಶಾಲೆಗಳಿಗೆ ಈ ಹಿಂದೆ ಆದೇಶ ಹೊರಡಿಸಿತ್ತು. ಈಗ ಡೆಸ್ಕ್, ವಿದ್ಯುತ್ ಬಿಲ್ ಇನ್ನಿತರ ಖರ್ಚುಗಳಿಗಾಗಿ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿ ತಿಂಗಳು 100 ರೂಪಾಯಿ ಶುಲ್ಕ ಪಡೆಯುವಂತೆ ರಾಜ್ಯ ಶಿಕ್ಷಣ ಇಲಾಖೆಯು ಶಾಲೆಗಳ ಆಡಳಿತ ಮಂಡಳಿಗಳಿಗೆ ಸುತ್ತೋಲೆ ಹೊರಡಿಸಿದೆ. ಬಿಜೆಪಿ ಆಡಳಿತದಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದ ಸರ್ಕಾರ ದಿವಾಳಿಯಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಹೇಳಿದರು.

“ಖಾಸಗಿ ಶಾಲೆಗಳಿಗೆ ಹೋಗಲು ಸಾಧ್ಯವಾಗದ ಹಾಗೂ ಸರ್ಕಾರಿ ಶಾಲೆಯಲ್ಲಿ ಓದಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ರಾಜ್ಯ ಸರ್ಕಾರಗಳ ಹೊಣೆ ಎಂದು ಸಂವಿಧಾನದ 21 ಎ ವಿಧಿಯು ಸ್ಪಷ್ಟವಾಗಿ ಹೇಳಿದೆ. ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 3ರ ಪ್ರಕಾರ ಎಂಟನೇ ತರಗತಿ ತನಕ ಯಾವುದೇ ಅಡ್ಡಿಯಿಲ್ಲದೇ ಸರ್ಕಾರವು ಶಿಕ್ಷಣ ನೀಡಬೇಕಿದೆ. ಆದರೆ ರಾಜ್ಯ ಸರ್ಕಾರವು ಈ ಎರಡೂ ಕಾನೂನಿನ ಉದ್ದೇಶವನ್ನು ಗಾಳಿಗೆ ತೂರಿ, ಪೋಷಕರಿಂದ ಹಣ ವಸೂಲಿ ಮಾಡಲು ಮುಂದಾಗಿದೆ. ಹಣ ಪಾವತಿಸಲು ಸಾಧ್ಯಗುವ ಪೋಷಕರ ಮಕ್ಕಳಿಗೆ ಮಾತ್ರ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದಂತಿದೆ” ಎಂದು ಮೋಹನ್ ದಾಸರಿ  ಹೇಳಿದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪಕ್ಷದ ನೀತಿ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಕಾಶ್ ನೆಡುಂಗಡಿ ಮಾತನಾಡುತ್ತಾ “ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರವು ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ಸುಮಾರು ಶೇ. 25ರಷ್ಟು ಅನುದಾನವನ್ನು ಮೀಸಲಿಡುತ್ತಿದೆ. ಅಲ್ಲಿನ ಶಾಲೆಗಳಿಗೆ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಎಎಪಿ ಸರ್ಕಾರ ಒದಗಿಸುತ್ತಿದೆ. ಆದರೆ ಕರ್ನಾಟಕದ ಬಿಜೆಪಿ ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುವ ಬದಲು ಪೋಷಕರಿಂದ ಹಣ ವಸೂಲಿ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಈವರೆಗೆ ವಿವಿಧ ತೆರಿಗೆಗಳನ್ನು ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದ ಬಿಜೆಪಿ ಸರ್ಕಾರವು ಈಗ ಪೋಷಕರಿಂದ ಹಣ ಪಡೆಯುವ ಮೂಲಕ ಹಗಲು ದರೋಡೆಗೆ ಇಳಿದಿದೆ” ಎಂದು  ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಬೆಂಗಳೂರು  ನಗರ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.



Join Whatsapp