ಬಿಬಿಎಂಪಿ ಚುನಾವಣೆಗೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಮುಖಂಡರ ಉಪವಾಸ ಸತ್ಯಾಗ್ರಹ

Prasthutha|

ಬೆಂಗಳೂರು: ಕಳೆದೆರಡು ವರ್ಷಗಳಿಂದ ಬಿಬಿಎಂಪಿ ಚುನಾವಣೆಗೆ ಅಡ್ಡಗಾಲು ಹಾಕುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕವಾಗಿರುವ ರಾಜ್ಯ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವವಿರೋಧಿ ನಡೆ ಖಂಡಿಸಿ ಆಮ್ ಆದ್ಮಿ ಪಾರ್ಟಿ ಮುಖಂಡರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

- Advertisement -

 ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಉಪವಾಸ ಕುಳಿತ ಪಕ್ಷದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿ, “ಸೋಲಿನ ಭಯದಿಂದಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಜೆಪಿಯು ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಿದೆ. ಬಿಜೆಪಿಯ ಈ ಕುತಂತ್ರ ರಾಜಕೀಯದಿಂದಾಗಿ ಬೆಂಗಳೂರಿನ ಜನತೆ ನೂರಾರು ತೊಂದರೆ ಅನುಭವಿಸುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಾರ್ಪೊರೇಟರ್ಗಳೇ ಇಲ್ಲ. ಶಾಸಕರು ಹಾಗೂ ಸಂಸದರು ಇದ್ದರೂ ಕೈಗೆ ಸಿಗುವುದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯವನ್ನೇ ಬುಡಮೇಲು ಮಾಡುತ್ತಿರುವ ಬಿಜೆಪಿಯ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರಿಗೆ ನಾಚಿಕೆಯಾಗಬೇಕು” ಎಂದು ಹೇಳಿದರು.

- Advertisement -

“ಬಿಬಿಎಂಪಿ ಚುನಾವಣೆಗೆ ಒತ್ತಾಯಿಸಿ ಕಳೆದ ಮೂರು ದಿನಗಳು ಬೆಂಗಳೂರಿನಾದ್ಯಂತ ಎಎಪಿ ಕಾರ್ಯಕರ್ತರು ಸಹಿಸಂಗ್ರಹ ಮಾಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜನರು ನಿಲುವು ತಾಳಿರುವುದು ಈ ವೇಳೆ ನಮ್ಮ ಗಮನಕ್ಕೆ ಬಂದಿದೆ. ಬೆಂಗಳೂರಿನಾದ್ಯಂತ ಆಮ್ ಆದ್ಮಿ ಪಾರ್ಟಿಗೆ ಜನಬೆಂಬಲ ಹೆಚ್ಚಾಗುತ್ತಿದ್ದು, ಇದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಭ್ರಷ್ಟ ಪಕ್ಷಗಳನ್ನು ಬದಿಗೊತ್ತಿ ಪ್ರಾಮಾಣಿಕ ಆಡಳಿತವನ್ನು ತರಬೇಕೆಂಬ ಬೆಂಗಳೂರಿಗರ ನಿಲುವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಬಿಜೆಪಿಯು ಚುನಾವಣೆಯನ್ನು ಮುಂದೂಡುತ್ತಿದೆ. ಸರ್ಕಾರವು ಚುನಾವಣೆ ಮುಂದೂಡಲು ತೋರಿದ ಉತ್ಸಾಹವನ್ನು ಬೆಂಗಳೂರನ್ನು ಅಭಿವೃದ್ಧಿ ಪಡಿಸಲು ತೋರಿಸಿದ್ದರೆ, ಇದು ಇಂದು ಜಗತ್ತಿನ ನಂಬರ್ ಒನ್ ನಗರವಾಗುತ್ತಿತ್ತು” ಎಂದು ಮೋಹನ್ ದಾಸರಿ ಹೇಳಿದರು.

“ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಬಿಬಿಎಂಪಿ ಚುನಾವಣೆ ನಡೆಯಬೇಕೆಂದು ಆಗ್ರಹಿಸುತ್ತಿಲ್ಲ. ಆಮ್ ಆದ್ಮಿ ಪಾರ್ಟಿಯೊಂದೇ ನಿರಂತರವಾಗಿ ಹೋರಾಟ ಮಾಡುತ್ತಾ, ಪ್ರಜಾಪ್ರಭುತ್ವ ಉಳಿಸಲು ಆಗ್ರಹಿಸುತ್ತಿದೆ. ನಾವು ಚುನಾವಣೆಗೆ ಸಂಪೂರ್ಣ ಸಿದ್ಧವಾಗಿದ್ದು, ಯಾವಾಗ ಚುನಾವಣೆ ನಡೆದರೂ ನಾವೇ ಗೆಲ್ಲುವ ದೃಢ ವಿಶ್ವಾಸವಿದೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಭರ್ಜರಿ ಬಹುಮತದಿಂದ ಜಯಗಳಿಸಲಿದ್ದು, ಬಿಬಿಎಂಪಿ ಚುನಾವಣೆಯಲ್ಲೂ ಅಂತಹದೇ ಫಲಿತಾಂಶ ಬರಲಿದೆ” ಎಂದು ಮೋಹನ್ ದಾಸರಿ ಹೇಳಿದರು.

ಆಮ್ ಆದ್ಮಿ ಪಾರ್ಟಿ ಮುಖಂಡರಾದ ಜಗದೀಶ್ ವಿ ಸದಂ, ಅಶೋಕ್ ಮೃತ್ಯುಂಜಯ, ಗೋಪಿನಾಥ್, ಶ್ರೀನಿವಾಸ್ ರೆಡ್ಡಿ, ವೀಣಾ ಸೆರ್ರಾವ್, ಡಾ. ಕೇಶವ ಕುಮಾರ್ ಮತ್ತಿತರ ನಾಯಕರು, ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.



Join Whatsapp