ಪಾಠಶಾಲೆ ನಿವೇಶನ ಕಬಳಿಕೆ ಖಂಡಿಸಿ ಆಮ್‌ ಆದ್ಮಿ ಪಾರ್ಟಿಯಿಂದ ಬೃಹತ್‌ ಪ್ರತಿಭಟನೆ

Prasthutha|

ಬೆಂಗಳೂರು: ಇಲ್ಲಿನ  ಬಿನ್ನಿಪೇಟೆಯಲ್ಲಿರುವ ಬಿನ್ನಿ ಪಾಠಶಾಲೆಯ ನಿವೇಶನ ಕಬಳಿಸುವ ಸಂಚನ್ನು ವಿರೋಧಿಸಿ ಆಮ್‌ ಆದ್ಮಿ ಪಾರ್ಟಿಯ ಅನೇಕ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

- Advertisement -

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆಮ್‌ ಆದ್ಮಿ ಪಾರ್ಟಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮುಖಂಡ ರಾಜಶೇಖರ್ ದೊಡ್ಡಣ್ಣ, “ಮೈಸೂರು ಅರಸರು 1902ರಲ್ಲಿ ಬಿನ್ನಿ ಮಿಲ್‌ ಕಾರ್ಖಾನೆಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆಂದು ಈ ನಿವೇಶನವನ್ನು ನೀಡಿದ್ದರು. ಸುಮಾರು 120 ವರ್ಷಗಳಿಂದ ಸರ್ಕಾರಿ ಶಾಲೆಗೆ ಬಳಕೆಯಾಗುತ್ತಿರುವ ಈ ಐತಿಹಾಸಿಕ ನಿವೇಶನದ ಅತಿಕ್ರಮಕ್ಕೆ ಪಿತೂರಿ ನಡೆಯುತ್ತಿದೆ” ಎಂದು ಆರೋಪಿಸಿದರು.

“ಶಾಲೆಯ ನಿರ್ವಹಣೆಗಾಗಿ ಬಂದ ಇಟಿಎ ಸಂಸ್ಥೆ ಹಾಗೂ ಬಿನ್ನಿಪೇಟೆ ನಾಗರಿಕ ಹಿತರಕ್ಷಣಾ ಸಂಸ್ಥೆಯು ಪುನರ್‌ ನಿರ್ಮಾಣದ ನೆಪದಲ್ಲಿ ಶಾಲೆಯ ಕಟ್ಟಡವನ್ನು ಮುಂಭಾಗದಲ್ಲಿ ನಿರ್ಮಿಸಿ, ನಿವೇಶನದ ಹಿಂಭಾಗವನ್ನು ಅತಿಕ್ರಮಣ ಮಾಡುತ್ತಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಈ ನಿವೇಶನವು ಸುಮಾರು 12,000 ಚದರ ಅಡಿಯಿದ್ದು, ಕೋಟ್ಯಂತರ ರೂಪಾಯಿ ಬೆಲೆಯಿದೆ. ಹೀಗೆ ಅತಿಕ್ರಮಣ ಮಾಡಿಕೊಂಡ ನಿವೇಶನವನ್ನು ಹಲವು ಸೈಟುಗಳಾಗಿ ಮಾಡಿ ಮಾರಾಟ ಮಾಡಲು ಅವೆರಡು ಸಂಸ್ಥೆಗಳ ಜೊತೆಗೆ ಬಿನ್ನಿಪೇಟೆಯ ಸ್ಥಳೀಯ ರಾಜಕೀಯ ಪುಡಾರಿಗಳು ಕೈಜೋಡಿಸಿದ್ದಾರೆ” ಎಂದು ರಾಜಶೇಖರ್‌ ದೊಡ್ಡಣ್ಣ ಹೇಳಿದರು.

- Advertisement -

ಏಕಾಏಕಿ ಜೆಸಿಬಿ ತಂದು ಶಾಲೆಯ ಕಟ್ಟಡವನ್ನು ಧ್ವಂಸ ಮಾಡುತ್ತಿರುವ ವೇಳೆ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕೋಶ ವ್ಯಕ್ತಪಡಿಸಿದರು. ಅನೇಕ ಸ್ಥಳೀಯ ನಾಗರಿಕರು ಪ್ರತಿಭಟನೆಗೆ ಬೆಂಬಲ ನೀಡಿದರು.



Join Whatsapp