ಬೆಂಗಳೂರು: ಕಳ್ಳತನ ಮಾಡಲ್ಪಟ್ಟ ವಸ್ತುಗಳನ್ನು ಖರೀದಿಸಿದ ಆರೋಪದಲ್ಲಿ ಠಾಣೆಗೆ ಕರೆದೊಯ್ದ ಪೊಲೀಸರು, ತೀವ್ರ ಹಿಂಸೆ ನೀಡಿದ ಪರಿಣಾಮ ಆತ ತನ್ನ ಬಲಗೈಯನ್ನೇ ಕಳೆದುಕೊಂಡ ದಾರುಣ ಘಟನೆಯೊಂದು ವರ್ತೂರಿನಲ್ಲಿ ನಡೆದಿದೆ.
ಈ ಬಗ್ಗೆ ಸಂತ್ರಸ್ತ ಕುಟುಂಬ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಪೊಲೀಸರ ಮಾರಣಾಂತಿಕ ಹಲ್ಲೆಯಿಂದ ಕೈ ಕಳೆದುಕೊಂಡಿರುವ ಅಮ್ಜದ್ ಖಾನ್ ಎಂಬವರ ಪುತ್ರ ಸಲ್ಮಾನ್ ಖಾನ್ (22) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿ ಅವರ ಕೈ ಕತ್ತರಿಸಲ್ಪಡುವಂತೆ ಮಾಡಿದ ವರ್ತೂರು ಪೊಲೀಸ್ ಠಾಣೆ ಕ್ರೈಂ ಬ್ರಾಂಚ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕಮಲ್ ಪಂತ್ ಅವರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಲಾಗಿದೆ.
ಘಟನೆಯ ಹಿನ್ನೆಲೆ
ಸಲ್ಮಾನ್ ಖಾನ್ ಕೋಳಿ ಅಂಗಡಿ ವ್ಯಾಪಾರ ನಡೆಸುತ್ತಿದ್ದು, 2021, ಅಕ್ಟೋಬರ್ 27ರಂದು ವರ್ತೂರು ಪೊಲೀಸ್ ಠಾಣೆಯ ಕ್ರೈಂ ಬ್ರಾಂಚ್ ಪೊಲೀಸರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ರಾತ್ರಿ 11-30ರ ಸುಮಾರಿಗೆ ಸಲ್ಮಾನ್ ಖಾನ್ ನನ್ನು ಠಾಣೆಗೆ ಕರೆದೊಯ್ದಿದ್ದರು. ಎಷ್ಟು ಹೊತ್ತಾದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನನ್ನು ವಿಚಾರಿಸಲು ತಂದೆ ಮತ್ತು ತಾಯಿ ಠಾಣೆಗೆ ಹೋಗಿದ್ದಾರೆ. ನಿಮ್ಮ ಮಗ ಇಲ್ಲಿ ಇಲ್ಲ ಎಂದು ಪೋಷಕರನ್ನು ಪೊಲೀಸರು ಸಾಗ ಹಾಕಿದ್ದರು. ಬಳಿಕ ಪೋಷಕರು ಸರ್ಜಾಪುರ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದಾಗ ಅಲ್ಲಿಯೂ ಇಲ್ಲ ಎಂಬ ಉತ್ತರವನ್ನು ಪೊಲೀಸರು ನೀಡಿದ್ದರು.
ಮತ್ತೆ ವರ್ತೂರು ಪೊಲೀಸ್ ಠಾಣೆಗೆ ಬಂದಾಗ ಸ್ಟೇಷನ್ ಒಳಗಡೆಯಿಂದಲೇ ಸಲ್ಮಾನ್ ಕಿರುಚಾಡುವುದು ಕೇಳಿಸಿದೆ. ಆಗ ಆತನ ತಾಯಿ ಯಾವುದೇ ದೂರು ಇಲ್ಲದೆ ನನ್ನ ಮಗನನ್ನು ಏಕೆ ಬಂಧಿಸಿದ್ದೀರಿ ? ಎಂದು ಪೊಲೀಸರೊಂದಿಗೆ ಕೇಳಿದ್ದಾರೆ.
ಪೊಲೀಸರು ನನ್ನ ಮಗನನ್ನು ಯಾವುದೋ ಕಳ್ಳತನದ ಸುಳ್ಳು ಆರೋಪದಲ್ಲಿ ಸಿಲುಕಿಸಿ ಮಾರಣಾಂತಿಕವಾಗಿ ಹೊಡೆದಿದ್ದಾರೆ. ಪರಿಣಾಮ ಆತನ ಬಲಗ್ಗೆ ಸಂಪೂರ್ಣ ಜಖಂ ಗೊಂಡಿದ್ದು , ರಕ್ತ ಹೆಪ್ಪುಗಟ್ಟುವಂತೆ ಹೊಡೆದ ಪರಿಣಾಮ ಕೈಯಲ್ಲಿ ಕೀವು ತುಂಬಿದೆ. ಏಕಾಏಕಿ ಜ್ವರ ಬಂದು ಸಂಪೂರ್ಣವಾಗಿ ಕುಸಿದು ಹೋಗಿದ್ದ. ನಡೆದಾಡಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರಿಗೆ ನನ್ನ ಮಗನನ್ನು ಬಿಡುಗಡೆ ಮಾಡುವಂತೆ ಕೋರಿದಾಗ, ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಮಗನಿಗೆ ಜ್ವರ ಬಂದ ಕಾರಣ ಅಲ್ಲಿಂದ ಕರೆದುಕೊಂಡು ಹೋಗುವಂತೆ ಪೊಲೀಸರೇ ಸೂಚಿಸಿದರು ಎಂದು ಸಲ್ಮಾನ್ ತಾಯಿ ಆರೋಪಿಸಿದ್ದಾರೆ.
ಬಳಿಕ ಸಲ್ಮಾನ್ ನನ್ನು ಅವರ ತಾಯಿ ಸರ್ಜಾಮಠ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯರ ಸಲಹೆಯಂತೆ ಮುತ್ಯಾನೂರು ಕ್ರಾಸ್ ಆಸ್ಪತ್ರೆ, ಬಳಿಕ ವರ್ತೂರು ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಲ್ಮಾನ್ ನ ಪರಿಸ್ಥಿತಿಯನ್ನು ನೋಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸ್ ಮಾಟ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವೈದ್ಯರು ಸಲ್ಮಾನ್ ಖಾನ್ ನನ್ನು ಪರಿಶೀಲಿಸಿದಾಗ ಆತನಿಗೆ ತೀವ್ರ ಗಾಯಗಳಾಗಿದ್ದು ಮತ್ತು ಆತನ ಬಲಗೈ ಸಂಪೂರ್ಣ ಊನಗೊಂಡಿರುವುದು ಬೆಳಕಿಗೆ ಬಂದಿದೆ. ಕೈ ಸರಿಪಡಿಸಲಾಗದಷ್ಟು ಹಾನಿಯಾಗಿರುವುದರಿಂದ ಮತ್ತು ಕೀವು ತುಂಬಿರುವುದರಿಂದ ಕೈ ತೆಗೆಯಬೇಕು. ಇಲ್ಲದಿದ್ದರೆ ಜೀವಕ್ಕೆ ಹಾನಿಯಾಗಬಹುದು ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ಬಲಗೈಯನ್ನು ಕತ್ತರಿಸಿ ತೆಗೆಯಲಾಗಿದೆ.ಈಗಾಗಲೇ ಸಂತ್ರಸ್ತ ಕುಟುಂಬ ಸಲ್ಮಾನ್ ಚಿಕಿತ್ಸೆಗಾಗಿ 2,50,000 ಗಳನ್ನು ಖರ್ಚು ಮಾಡಿದೆ. ಬಡತನದಲ್ಲಿರುವ ಕುಟುಂಬಕ್ಕೆ ಇನ್ನೂ ಹಾಸ್ ಮಾಟ್ ಆಸ್ಪತ್ರೆಯ ಬಿಲ್ಲನ್ನು ಪಾವತಿ ಮಾಡಲು ಸಾಧ್ಯವಾಗಿಲ್ಲ. ನನ್ನ ಮಗನ ದೈಹಿಕ ಅಂಗವೈಕಲ್ಯಕ್ಕೆ ಕಾರಣರಾದ ಪೊಲೀಸರಿಂದಲೇ ಆತನ ಚಿಕಿತ್ಸೆಯ ಖರ್ಚು ವೆಚ್ಚಗಳನ್ನು ವಸೂಲಿ ಮಾಡಬೇಕು. ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಆತನಿಗೆ ಪ್ರಾಣ ಭಯ ಇರುವುದರಿಂದ ರಕ್ಷಣೆ ನೀಡಬೇಕು ಎಂದು ಕಮಲ್ ಪಂತ್ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.