ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಯ ಸ್ಮರಣಾರ್ಥ 75 ರೂ.ಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದಾಗಿ ಹಣಕಾಸು ಸಚಿವಾಲಯ ಗುರುವಾರ ತಿಳಿಸಿದೆ.
75 ರೂ.ಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗಡೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗುತ್ತದೆ. ನಾಣ್ಯದ ಇನ್ನೊಂದು ಬದಿಯಲ್ಲಿ ನೂತನ ಸಂಸತ್ತಿನ ಸಂಕೀರ್ಣದ ಚಿತ್ರವನ್ನು ಹೊಂದಿರಲಿದೆ. ‘ಸಂಸದ್ ಸಂಕುಲ್’ ಎಂದು ಅದರ ಮೇಲ್ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಹಾಗೂ ‘ಪಾರ್ಲಿಮೆಂಟ್ ಕಾಂಪ್ಲೆಕ್ಸ್’ ಎಂದು ಇಂಗ್ಲಿಷ್ ನಲ್ಲಿ ಅದರ ಕೆಳ ಭಾಗದಲ್ಲಿ ಬರೆಯಲಾಗುತ್ತದೆ.
ನಾಣ್ಯವು ವೃತ್ತಾಕಾರದಲ್ಲಿದ್ದು, 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಬಳಸಿ ನಾಣ್ಯ ತಯಾರಿಸಲಾಗುತ್ತಿದ್ದು, ಇದು 35 ಗ್ರಾಂ ತೂಗಲಿದೆ. ಈ ವಿಶೇಷ ನಾಣ್ಯವು 75 ವರ್ಷಗಳ ಸ್ವತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವದ ಸಂಕೇತವೂ ಆಗಿರಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.