ಜೆರುಸೆಲೇಂ: ಇಸ್ರೇಲ್‌ನಲ್ಲಿ ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಇದಕ್ಕಾಗಿ ಇಸ್ರೇಲ್ ಕಟ್ಟಡ ನಿರ್ಮಾಣ ಉದ್ಯಮವು ಭಾರತಕ್ಕೆ ಮೊರೆ ಹೋಗಿದೆ. ಕಾರ್ಮಿಕರನ್ನು ಭಾರತದಿಂದ ಇಸ್ರೇಲ್‌ಗೆ ಕರೆತರಲಿಕ್ಕಾಗಿಯೇ ಆಯ್ಕೆದಾರರ ತಂಡವೊಂದು ಕಳೆದ ವಾರ ಭಾರತಕ್ಕೆ ಭೇಟಿ ನೀಡಿತ್ತು. ಮತ್ತೊಂದು ತಂಡ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದೆ. ಈ ಮಾಹಿತಿಯನ್ನು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಷನ್ ತಿಳಿಸಿದೆ.
ಕಾರ್ಮಿಕರ ಸಮಸ್ಯೆಗಳು ಮತ್ತು ಆಯ್ಕೆ ತಂಡವನ್ನು ನಿಭಾಯಿಸುವ ಐಬಿಎ ವಿಭಾಗದ ಮುಖ್ಯಸ್ಥ ಇಜಾಕ್ ಗುರ್ವಿಟ್ ನೇತೃತ್ವದ ನಿಯೋಗ ಕಳೆದ ವಾರ ಭಾರತಕ್ಕೆ ಭೇಟಿ ನೀಡಿತ್ತು. ಮುಂದಿನ ವಾರ ಐಬಿಎ ತಂಡದ ಇತರ ಸದಸ್ಯರೊಂದಿಗೆ ಸಿಇಒ ಇಗಲ್ ಸ್ಲೋವಿಕ್ ಕಾರ್ಮಿಕರ ನೇಮಕಾತಿಗಾಗಿಯೇ ಭೇಟಿ ನೀಡಲಿದ್ದಾರೆ. ಈ ನಿಯೋಗದೊಂದಿಗೆ ನಿರ್ಮಾಣ ಮತ್ತು ವಸತಿ ಸಚಿವಾಲಯದ ಮಹಾನಿರ್ದೇಶಕ ಯೆಹುದಾ ಮೊರ್ಗೆನ್‌ಸ್ಟೆರ್ನ್ ಕೂಡ ಇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಕೂಡ ಭಾರತದಿಂದ ಕಾರ್ಮಿಕರನ್ನು ಕರೆತರುವ ಕುರಿತಂತೆ ಚರ್ಚಿಸಿದ್ದಾರೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.