ಹೈದರಾಬಾದ್: ಮುಜಾಫರ್‌ನಗರ ಪೊಲೀಸರ ಆದೇಶ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ. ಪೊಲೀಸರಿಗೆ ಈ ಸೂಚನೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಹಿಟ್ಲರ್ ಆತ್ಮ ಆವರಿಸಿದೆ ಎಂದು ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದಾರೆ.
ಕನ್ವರ್ ಯಾತ್ರೆ ಮಾರ್ಗದಲ್ಲಿರುವ ಹೋಟೆಲ್ಗಳ ಮಾಲೀಕರು ಮತ್ತು ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸುವಂತೆ ಪೊಲೀಸರ ಆದೇಶಕ್ಕೆ ಅಸದುದ್ದೀನ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಈ ಆದೇಶವನ್ನು ನಾನು ಖಂಡಿಸುತ್ತೇನೆ. ಇದು ಅಸ್ಪೃಶ್ಯತೆಯನ್ನು ನಿಷೇಧಿಸುವ ಭಾರತೀಯ ಸಂವಿಧಾನದ 17ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಉತ್ತರಪ್ರದೇಶ ಸರ್ಕಾರ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತಿದೆ. ಹೆಸರು ಮತ್ತು ಧರ್ಮದ ಪ್ರದರ್ಶನವನ್ನು ನಿರ್ದೇಶಿಸುವ ಈ ಆದೇಶವು ಆರ್ಟಿಕಲ್ 21 (ಜೀವನದ ಹಕ್ಕು) ಮತ್ತು ಆರ್ಟಿಕಲ್ 19 (ಜೀವನದ ಹಕ್ಕು) ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಆದೇಶ ಹೊರಡಿಸಿದಾಗಿನಿಂದ ಮುಜಾಫರ್‌ನಗರದ ಅನೇಕ ಮುಸ್ಲಿಂ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಡಾಬಾ ಮಾಲೀಕರು ಅವರನ್ನು ಕೆಲಸ ಬಿಡಲು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ಮತ್ತು ಪಿಜ್ಜಾ ಹಟ್ ಸಂಸ್ಥೆಗಳಿವೆ. ಆದರೆ ಅವುಗಳ ವಿರುದ್ಧ ಯಾವುದೇ ನಿರ್ದೇಶನಗಳಿಲ್ಲ. ನೀವು (ಸರ್ಕಾರ) ಅವರೊಂದಿಗೆ ಏನಾದರೂ ಒಪ್ಪಂದ ಮಾಡಿಕೊಂಡಿದ್ದೀರಾ? ಈ ಆದೇಶವು ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಹಿಟ್ಲರ್‌ನ ಆತ್ಮವಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಇದು ಕ್ರಿಸ್ಟಾಲ್‌ನಾಚ್ ಚಳುವಳಿಯಂತೆ ಕಾಣುತ್ತದೆ ಎಂದು ಹೇಳಿದ್ದಾರೆ.