ರಸ್ತೆ ಬದಿಯ ಅಂಗಡಿಯಿಂದ ಬಲ್ಬ್ ಕದ್ದ ಪೊಲೀಸ್ ಸಿಬ್ಬಂದಿ

Prasthutha|

ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ರಸ್ತೆ ಬದಿಯ ಅಂಗಡಿಯೊಂದರ ಹೊರಗಿನಿಂದ ಪೊಲೀಸ್ ಸಿಬ್ಬಂದಿಯೋರ್ವ ಬಲ್ಬ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಗೆ ಸಂಬಂಧಿಸಿ ಆತನನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

- Advertisement -

ಪ್ರಯಾಗ್ ರಾಜ್ ಜಿಲ್ಲೆಯ ಫುಲ್ಬುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನ್ ಸ್ಟೇಬಲ್ ರಾಜೇಶ್ ವರ್ಮಾ ಅವರು ಮುಚ್ಚಿರುವ ಅಂಗಡಿಯೊಂದರ ಹೊರಗಿನಲ್ಲಿ ಇರಿಸಲಾಗಿದ್ದ ಬಲ್ಬ್ ಕಳ್ಳತನ ಮಾಡಿದ್ದಾನೆ. ಮರುದಿನ ಬೆಳಗ್ಗೆ ಬಲ್ಬ್ ಕಾಣೆಯಾಗಿರುವುದನ್ನು ಗಮನಿಸಿದ ಅಂಗಡಿ ಮಾಲಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸಾರ್ವಜನಿಕರಿಗೆ ರಕ್ಷಣೆ ಒದಗಿಸಬೇಕಾದ ಪೊಲೀಸ್ ಸಿಬ್ಬಂದಿಯೋರ್ವ ಬಲ್ಬ್ ಅನ್ನು ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ.

ಘಟನೆ ಅಕ್ಟೋಬರ್ 6ರಂದು ನಡೆದಿದ್ದು, ದಸರಾ ದಿನವಾದುದರಿಂದ ಪೊಲೀಸರು ರಾತ್ರಿ ಕರ್ತವ್ಯದಲ್ಲಿದ್ದರು ಎಂದು ಸ್ಥಳೀಯರು ದೂರಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

- Advertisement -

ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶ ಪೊಲೀಸರು ಮುಖಭಂಗಕ್ಕೊಳಗಾದ ಎರಡನೇ ಘಟನೆ ಇದಾಗಿದ್ದು, ಕೆಲವು ದಿನಗಳ ಹಿಂದೆ ಕಾನ್ಪುರದಲ್ಲಿ ಮಾರ್ಗದ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ಜೇಬಿನಿಂದ ಮೊಬೈಲ್ ಫೋನ್ ಕದಿಯುವಾಗ ಪೊಲೀಸ್ ಸಿಬ್ಬಂದಿಯೊಬ್ಬ ಸಿಕ್ಕಿಬಿದ್ದಿದ್ದ.



Join Whatsapp