ಫ್ಯಾಕ್ಟ್ ಚೆಕ್ ನಲ್ಲಿ ವಾಸ್ತವಾಂಶ ಬಹಿರಂಗ
ನವದೆಹಲಿ: ಹಿಜಾಬ್ ವಿಚಾರದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಎಳೆದು ತಂದು ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರು ಮಾಡುತ್ತಿದ್ದ ಸುಳ್ಳಾರೋಪ ಬಟಾಬಯಲಾಗಿದೆ. ಜಾರ್ಖಂಡ್ ನ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಅವರು ರಾಹುಲ್ ಗಾಂಧಿ ಜೊತೆಗಿದ್ದ ಫೋಟೋವೊಂದನ್ನು ಹಂಚಿಕೊಂಡಿದ್ದ ಕೆಲವರು ಅದನ್ನು ಮಂಡ್ಯದ ಮುಸ್ಕಾನ್ ಜೊತೆಗೆ ರಾಹುಲ್ ಗಾಂಧಿ ಎಂದು ಪ್ರಚಾರಪಡಿಸಿದ್ದರು. ಹಿಜಾಬ್ ವಿವಾದ ಕಾಂಗ್ರೆಸ್ ಪಿತೂರಿ ಎಂದು ಆರೋಪ ಮಾಡಿದ್ದರು.
ರಾಹುಲ್ ಗಾಂಧಿ ಅವರ ಪಕ್ಕದಲ್ಲಿ ನಿಂತಿರುವ ಮಹಿಳೆಯ ಚಿತ್ರವನ್ನು ಮುಸ್ಕಾನ್ ಎಂದು ಬಿಂಬಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ಹಿಜಾಬ್ ಮುಂಚೂಣಿ ಹೋರಾಟದಲ್ಲಿದ್ದ ಮಂಡ್ಯದ ಮುಸ್ಕಾನ್ ಕಾಂಗ್ರೆಸ್ ಕಾರ್ಯಕರ್ತೆ, ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಪಿತೂರಿ ಅಡಗಿದೆ ಎಂದು ಆರೋಪಿಸಿ ಕೋಲಾಹಲ ಎಬ್ಬಿಸಿದ್ದರು
ಈ ಫೋಟೋ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ #ToolKitInAction ಎಂಬ ಹ್ಯಾಶ್‌ಟ್ಯಾಗ್ ವೈರಲ್ ಆಗುತ್ತಿದೆ.
ಫ್ಯಾಕ್ಟ್ ಚೆಕ್ ಮೂಲಕ ವಾಸ್ತವ ಅಂಶ ಬಹಿರಂಗ
ವೈರಲ್ ಫೋಟೋದ ಕುರಿತು ಆಲ್ಟ್ ನ್ಯೂಸ್ ನಡೆಸಿದ ಫ್ಯಾಕ್ಟ್ ಚೆಕ್ ನಲ್ಲಿ ವಾಸ್ತವಾಂಶ ಬಹಿರಂಗವಾಗಿದ್ದು, ಪೋಟೋದಲ್ಲಿ ರಾಹುಲ್ ಗಾಂಧಿ ಜೊತೆ ಇರುವ ಮಹಿಳೆ ಜಾರ್ಖಂಡ ನ ಬಡ್ಕಾಗಾಂವ್ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್. ಈ ಫೋಟೋವನ್ನು ಅಂಬಾ ಪ್ರಸಾದ್ ತಮ್ಮ ಅಧಿಕೃತ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿರುವುದು ಬಹಿರಂಗವಾಗಿದೆ. ಇದೇ ತಿಂಗಳಲ್ಲಿ ಇತರ ಶಾಸಕರೊಂದಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಫೋಟೋವನ್ನು ತೆಗೆಯಲಾಗಿದೆ ಎಂದು ಅಂಬಾ ಪ್ರಸಾದ್ ತಿಳಿಸಿದ್ದಾರೆ. ಈ ಫೋಟೋ ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಅಪ್ಲೋಡ್ ಆಗಿತ್ತು.
ನನ್ನ ಫೋಟೋವನ್ನು ಮುಸ್ಕಾನ್ ಎಂದು ಅಪಪ್ರಚಾರ ನಡೆಸಿದವರ ನಡೆಯ ಕುರಿತು ಪ್ರತಿಕ್ರಿಯಿಸಿದ ಅಂಬಾ ಪ್ರಸಾದ್ ‘ಫೆಬ್ರವರಿ 10ರಿಂದ ಈ ವೈರಲ್ ಆಗುತ್ತಿರುವ ಫೋಟೋ ನನ್ನದಾಗಿದೆ’ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಜಾರ್ಖಂಡ್ ಪೊಲೀಸರಿಗೆ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.