ಬೆಂಗಳೂರು: ದಕ್ಷಿಣ ಭಾರತದ ಪ್ರಥಮ ಏರಿಯಲ್ ಲ್ಯಾಡರ್ ಪ್ಲಾಟ್ ಫಾರ್ಮ್ ಅನ್ನು ರಾಜ್ಯ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಸೌಧದ ಮುಂಭಾಗದ ಆವರಣದಲ್ಲಿ ಲೋಕಾರ್ಪಣೆಗೊಳಿಸಿದರು.
ತುರ್ತು ಅಗ್ನಿ ಅವಘಡ ಸಂದರ್ಭದಲ್ಲಿ, ಸುಮಾರು 90 ಮೀಟರ್ ಎತ್ತರದ ವರೆಗೂ ತಲುಪಿ ಬೆಂಕಿಯನ್ನು ನಂದಿಸಲು ಹಾಗೂ ಅಪಾಯದಲ್ಲಿ ಸಿಲುಕಿದ ನಾಗರಿಕರನ್ನು ರಕ್ಷಿಸಲು ಯೋಗ್ಯವಾದ, ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಆಮದು ಮಾಡಿಕೊಂಡ ಭವ್ಯವಾದ ಸರ್ವ ಸುಸಜ್ಜಿತ ಹಾಗೂ ಆಧುನಿಕ ತಂತ್ರಜ್ಞಾನ ದ ಏಣಿಯನ್ನು ಸೇವೆಗೆ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ವಿಶ್ವದಲ್ಲಿಯೇ ತಂತ್ರಜ್ಞಾನದಲ್ಲಿ ಮುಂಚೂಣಿಲ್ಲಿರುವ ಬೆಂಗಳೂರು ನಗರದ ನಾಗರಿಕರ ಆಸ್ತಿ ಪಾಸ್ತಿ ಹಾಗೂ ಜನರ ಅಮೂಲ್ಯ ಜೀವ ರಕ್ಷಣೆಗೆ ಬೇಕಾದ ಎಲ್ಲಾ ಸಿದ್ಧತೆ ಗಳನ್ನು ಮಾಡಲಾಗುತ್ತಿದೆ. ನಮ್ಮ ಸರಕಾರದ ಅವಧಿಯಲ್ಲಿ ಗೃಹ ಇಲಾಖೆಯನ್ನು ಬಲಪಡಿಸಲು, ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿೂರಪ್ಪನವರು ಹಾಗೂ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಅತ್ಯಂತ ಹೆಚ್ಚಿನ ಅನುದಾನ ಒದಗಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು, ಬಲಪಡಿಸಲು ಹತ್ತು ಹಲವು ಕ್ರಮಗಳನ್ನು, ತೆಗೆದುಕೊಂಡ ಹಿನ್ನೆಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಸುಮಾರು ಎರಡು ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ, ಅಗ್ನಶಾಮಕದಳದ ಸೇವಾ ಘಟಕಗಳನ್ನು ಹೊಂದಿದ್ದು, ಇಲಾಖೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.