ಋತುಮತಿಯಾದ ಮುಸ್ಲಿಂ ಹೆಣ್ಣು ಮದುವೆಯಾಗಬಹುದು; ಮದುವೆ ವಯಸ್ಸು ಆಗಬೇಕೆಂದಿಲ್ಲ

Prasthutha|

►ಪೋಷಕರ ಒಪ್ಪಿಗೆಯೂ ಬೇಕಿಲ್ಲ ಎಂದ ದೆಹಲಿ‌ ಹೈ ಕೋರ್ಟ್

- Advertisement -

ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನು ಹಿನ್ನೆಲೆಯಲ್ಲಿ, ಋತುಮತಿಯಾದ ಮುಸ್ಲಿಂ ಹೆಣ್ಣು ಮಗಳು ಮದುವೆಯಾಗಬಹುದು. ಆಕೆಗೆ ಮದುವೆಯ ವಯಸ್ಸು (18 ವರ್ಷ) ಪೂರ್ತಿಯಾಗಬೇಕೆಂದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅಲ್ಲದೇ ಪೋಷಕರ ಅನುಮತಿ ಇಲ್ಲದೇ ಮದುವೆಯಾಗಬಹುದು. ಅಪ್ರಾಪ್ತಳೆಂಬ ಕಾರಣಕ್ಕೆ ಯುವತಿಯ ಗಂಡನ‌ ವಿರುದ್ಧ ಪೋಕ್ಸೋ ದಾಖಲಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬಾಲಕಿಯ ಮನೆಯವರ ವಿರೋಧದ ನಡುವೆಯೇ ಮದುವೆಯಾದ ಬಿಹಾರದ ಮುಸ್ಲಿಂ ಜೋಡಿಯ ಅರ್ಜಿ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ನ ಜಸ್ಟೀಸ್ ಜಸ್ಮೀತ್ ಸಿಂಗ್ ಈ ಆದೇಶ ಹೊರಡಿಸಿದ್ದಾರೆ.

- Advertisement -

ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಯು ಬಾಲಕಿಯ ಮನೆಯವರ ವಿರೋಧದ ನಡುವೆಯೇ ಮಾ. 11ರಂದು ಬಿಹಾರದ ಔರಿಯಾ ಜಿಲ್ಲೆಯ ಜೋಖಿಹತ್ ಮಸೀದಿಯ ಮೌಲಾನಾ ಇಮ್ತಿಯಾಝ್ ನೇತೃತ್ವದಲ್ಲಿ ಮದುವೆಯಾಗಿದ್ದರು.

ಈ ನಡುವೆ ಬಾಲಕಿ ಗರ್ಭಿಣಿಯಾದಾಗ, ಮದುವೆ ಸಂದರ್ಭದಲ್ಲಿ ಬಾಲಕಿಗೆ ಕೇವಲ 15 ವರ್ಷವಾಗಿತ್ತೆಂದು ಮನೆಯವರು ಯುವಕನ ವಿರುದ್ಧ ದ್ವಾರಕಾ ಜಿಲ್ಲೆಯಲ್ಲಿ ಅಪಹರಣ, ಅತ್ಯಾಚಾರ (ಪೊಕ್ಸೊ ಅಡಿ) ಪ್ರಕರಣ ದಾಖಲಿಸಿದ್ದರು.

ವಿಚಾರಣೆ ನಡೆಸಿದ ದೆಹಲಿ ಉಚ್ಛ ನ್ಯಾಯಾಲಯ, ಪಂಜಾಬ್ – ಹರ್ಯಾಣ ಹೈಕೋರ್ಟ್‌ನ ಅದೇಶ ಅವಲಂಬಿಸಿ ಸರ್ ದಿನ್ಶಾ ಫರ್ದುಂಜಿ ಮುಲ್ಲಾ ಅವರ Principles of Mohammedan Law ಪುಸ್ತಕವನ್ನು ಉಲ್ಲೇಖಿಸಿ ಈ ತೀರ್ಪು ನೀಡಿದೆ.

ಈ ನಡುವೆ ಬಾಲಕಿಯು ತನಗೆ ಮನೆಯಲ್ಲಿ ಬೇರೆ ವ್ಯಕ್ತಿಯನ್ನು ಮದುವೆಯಾಗಲು ದೈಹಿಕ ಹಲ್ಲೆ ನಡೆಸಿ ಒತ್ತಡ ಹಾಕುತ್ತಿದ್ದಾರೆ ಎಂದು ಕೋರ್ಟ್‌ಗೆ ವಿವರಿಸಿದ್ದಳು. ಬಾಲಕಿಯ ಮನೆಯಲ್ಲಿ ಕಿರುಕುಳವಿದ್ದು, ಸದ್ಯ ಬಾಲಕಿ ಗಂಡನ ಜೊತೆ ಸಂತೋಷವಾಗಿದ್ದಾಳೆ. ಈ ನಿಟ್ಟಿನಲ್ಲಿ ಪರಸ್ಪರ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಅವರು ಬೇರ್ಪಟ್ಟರೆ ಅದು ಹೆಣ್ಣು ಮತ್ತು ಅವಳ ಹುಟ್ಟಲಿರುವ ಮಗುವಿಗೆ ಹೆಚ್ಚಿನ ಆಘಾತವನ್ನು ಉಂಟುಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಯುವತಿ ಅಪ್ರಾಪ್ತೆ ಎಂಬ ಕಾರಣಕ್ಕೆ ಮದುವೆಯ ನಂತರದ ಲೈಂಗಿಕ ಸಂಬಂಧದ ಹಿನ್ನೆಲೆಯಲ್ಲಿ ಗಂಡನ ವಿರುದ್ಧ ಪೊಕ್ಸೊ ದಾಖಲಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಆದೇಶವನ್ನು ಆ. 17ರಂದು ನೀಡಲಾಗಿದ್ದು, ಆದೇಶದ ಸಂಪೂರ್ಣ ಪ್ರತಿ ಸೋಮವಾರ ಬಿಡುಗಡೆಯಾಗಿದೆ.

Join Whatsapp