ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿತು ಮತ್ತೊಂದು ರೈಲು ದುರಂತ!

Prasthutha|

ರಾಂಚಿ: ಒಡಿಶಾದ ಬಾಲಸೋರ್ ನಲ್ಲಿ ರೈಲು ದುರಂತದ ನೋವು ಮಾಸುವ ನಡುವೆಯೇ ಜಾರ್ಖಂಡ್‍ ನಲ್ಲಿ ಭಾರೀ ರೈಲು ದುರಂತವೊಂದು ತಪ್ಪಿದೆ.

- Advertisement -

ಜಾರ್ಖಂಡ್‍ನ ಬೊಕಾರೊದಲ್ಲಿ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಗೇಟ್‍ಗೆ ಟ್ರಾಕ್ಟರ್ ಅಪ್ಪಳಿಸಿದ್ದು, ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅವಘಡವೊಂದು ತಪ್ಪಿದಂತಾದ ಘಟನೆ ಮಂಗಳವಾರ ಸಂಜೆ ನಡೆದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವದೆಹಲಿ-ಭುವನೇಶ್ವರ ರಾಜಧಾನಿ ಎಕ್ಸ್ ಪ್ರೆಸ್ ಮಂಗಳವಾರ ಸಂಜೆ ಭೋಜುದಿಹ್ ಎನ್ನುವ ರೈಲ್ವೆ ನಿಲ್ದಾಣ ಸಮೀಪಿಸುತ್ತಿತ್ತು. ಇದಕ್ಕೂ ಮುನ್ನ ಬರುವ ಸಂತಾಲ್‍ದಿಹ್ ಎಂಬಲ್ಲಿ ರೈಲ್ವೆ ಕ್ರಾಸಿಂಗ್‍ಗೆ ಡಿಕ್ಕಿ ಹೊಡೆದು ಟ್ರಾಕ್ಟರ್ ಸಿಲುಕಿತ್ತು. ದೂರದಿಂದಲೇ ಇದನ್ನು ಗಮನಿಸಿದ ಲೋಕೋ ಪೈಲಟ್ ಕೂಡಲೇ ರೈಲಿನ ವೇಗವನ್ನು ಕಡಿಮೆ ಮಾಡಿದರು. ಇದರಿಂದ ಭಾರೀ ಅನಾಹುತವೊಂದು ತಪ್ಪಿದೆ.

- Advertisement -

ಟ್ರಾಕ್ಟರ್ ಕ್ರಾಸಿಂಗ್‍ನಲ್ಲಿ ಸಿಲುಕಿದ್ದರಿಂದ ಚಲಿಸದ ಸ್ಥಿತಿಯಲ್ಲಿತ್ತು. ಹೀಗಾಗಿ ರೈಲು ವೇಗವಾಗಿ ಬಂದಿದ್ದರೆ ಡಿಕ್ಕಿಯಾಗಿ ಮತ್ತೊಂದು ದುರಂತ ಸಂಭವಿಸಬಹುದಿತ್ತು. ಆದರೆ ಇದನ್ನು ಲೋಕೋ ಪೈಲಟ್ ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರಿಂದ ನಿಟ್ಟುಸಿರು ಬಿಡುವಂತಾಗಿದೆ. ಘಟನೆಯಿಂದ ಕೆಲ ಹೊತ್ತು ರೈಲು ನಿಲುಗಡೆಯಾಗಿ ನಂತರ ಪ್ರಯಾಣ ಮುಂದುವರಿಸಿತು ಎಂದು ಡಿಆರ್‍ಎಂ ಮನೀಶ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಟ್ರಾಕ್ಟರ್ ಅನ್ನು ಜಪ್ತಿ ಮಾಡಲಾಗಿದೆ. ಟ್ರಾಕ್ಟರ್ ಮಾಲೀಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ. ಇನ್ನು ಘಟನೆ ಸಂಬಂಧ ರೈಲ್ವೆ ಗೇಟ್ ಉಸ್ತುವಾರಿಯಾಗಿದ್ದ ನೌಕರನನ್ನು ಅಮಾನತುಗೊಳಿಸಲಾಗಿದೆ.

ಕಳೆದ ಶುಕ್ರವಾರ ಒಡಿಶಾದ ಬಾಲಸೋರ್ ನಲ್ಲಿ ಕೋರಮಂಡಲ್, ಯಶವಂತಪುರ ಹಾಗೂ ಗೂಡ್ಸ್ ಸಹಿತ ಮೂರು ರೈಲುಗಳ ಅಪಘಾತದಲ್ಲಿ 288ಮಂದಿ ಮೃತಪಟ್ಟಿದ್ದು, 1100 ಮಂದಿ ಗಾಯಗೊಂಡಿದ್ದರು.

Join Whatsapp