ಬೆಂಗಳೂರು: ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯವನ್ನು ಕಂದಾಯ ಇಲಾಖೆಯಿಂದ ಪ್ರತ್ಯೇಕಗೊಳಿಸಿ ಸರಕಾರ ಆದೇಶಿಸಿದೆ. ತಾಲ್ಲೂಕು ಹಂತದಲ್ಲಿ ಸ್ವತಂತ್ರವಾಗಿ ನಿರ್ವಹಿಸಲು ಈ ಆದೇಶ ನೆರವಾಗಲಿದೆ.
ಈ ಸಂಬಂಧ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಸರ್ಕಾರದ ಮಹಾತ್ಮಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯದಲ್ಲಿರುವ ಒಟ್ಟು 15279900 ಪಡಿತರ ಚೀಟಿಗಳ (ಒಟ್ಟು ಆದ್ಯತಾ ಪಡಿತರ ಚೀಟಿ ಸಂಖ್ಯೆ: 11695018, ಒಟ್ಟು ಆದ್ಯತೇತರ ಪಡಿತರ ಚೀಟಿ ಸಂಖ್ಯೆ:2496451 ಮತ್ತು ಅಂತ್ಯೋದಯ ಅನ್ನ ಪಡಿತರ ಚೀಟಿ ಸಂಖ್ಯೆ:1088431), ಒಟ್ಟು 52303799 ಫಲಾನುಭವಿಗಳಿಗೆ ಪಡಿತರವನ್ನು ವಿತರಿಸುವ ಮೂಲಕ ಹಸಿವು ಮುಕ್ತ ಕರ್ನಾಟಕ ರಾಜ್ಯವನ್ನಾಗಿಸಬೇಕೆಂಬ ಸರ್ಕಾರದ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.
ಇಲಾಖೆಯು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಮಟ್ಟದಲ್ಲಿ ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಸಚಿವರು, ಪ್ರತ್ಯೇಕ ಕಾರ್ಯದರ್ಶಿಗಳು, ಪ್ರತ್ಯೇಕ ಆಯುಕ್ತಾಲಯ ಹೊಂದಿದ್ದು, ಜಿಲ್ಲಾ ಮಟ್ಟದಲ್ಲೂ ಸಹ ಉಪನಿರ್ದೇಶಕರು/ಜಂಟಿ ನಿರ್ದೇಶಕರು ಹುದ್ದೆಗಳನ್ನು ಹೊಂದಿದ್ದು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ ಆದರೆ ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಆಹಾರ ಇಲಾಖೆಯ ಪ್ರತ್ಯೇಕ ಡ್ರಾಯಿಂಗ್ ಅಧಿಕಾರಿ ಇರುವುದಿಲ್ಲ. ಆದ್ದರಿಂದ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಆಹಾರ ಇಲಾಖೆಯನ್ನು ತಾಲ್ಲೂಕು ಹಂತದಲ್ಲಿ ಕಂದಾಯ ಇಲಾಖೆಯಿಂದ ಬೇರ್ಪಡಿಸಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವುದು ಅವಶ್ಯಕವೆಂದು ಹಾಗೂ ಪ್ರತಿ ತಾಲ್ಲೂಕಿಗೆ 01 ಸಹಾಯಕ ನಿರ್ದೇಶಕರ ಹುದ್ದೆಯನ್ನು ಸೃಜಿಸುವ ಮೂಲಕ ಸದರಿ ಅಧಿಕಾರಿಯವರನ್ನು ತಾಲ್ಲೂಕು ಮಟ್ಟದ ಅಧಿಕಾರಿಯನ್ನಾಗಿಸಿ ಇಲಾಖೆಯ ತಾಲ್ಲೂಕು ಮಟ್ಟದ ಜವಾಬ್ದಾರಿಯನ್ನು ನಿರ್ವಹಿಸುವಂತೆ ಮಾಡುವುದು ಅವಶ್ಯಕವೆಂದು ಉಲ್ಲೇಖ(1)ರ ಸಭೆಗಳಲ್ಲಿ ಸಚಿವರು ತಿಳಿಸಿರುತ್ತಾರೆ.
ಅದಕ್ಕಾಗಿ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿರುತ್ತಾರೆ. ಉಲ್ಲೇಖ(2)ರನ್ವಯ ರಾಜ್ಯಾಧ್ಯಕ್ಷರು, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿ/ನೌಕರರ ಕೇಂದ್ರ ಸಂಘ(ನೋಂ.)ರವರು ಮನವಿ ಸಲ್ಲಿಸಿ ಇದೇ ವಿಷಯವನ್ನು ಪ್ರಸ್ತಾಪಿಸಿರುತ್ತಾರೆ. ಅದರಂತೆ ಉಲ್ಲೇಖ(3)ರನ್ವಯ ಈಗಾಗಲೇ ಒಟ್ಟು 198 ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಸೃಜಿಸಲು ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಆದರೆ ಪ್ರತಿ ಸಹಾಯಕ ನಿರ್ದೇಶಕರ ಕಛೇರಿಗೆ ಅಗತ್ಯವಾದ ಸಿಬ್ಬಂದಿಗಳ ಹುದ್ದೆಗಳನ್ನು ಸೃಜಿಸುವುದು ಅವಶ್ಯಕವಾಗಿರುತ್ತದೆ ಎಂದಿದ್ದಾರೆ.
ಮುಂದುವರೆದು, ತಾಲ್ಲೂಕು ಹಂತದಲ್ಲಿ ಆಹಾರ ಇಲಾಖೆಯು ತಹಶಿಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳು ರವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಹಶೀಲ್ದಾರ್ ರವರು ಆಹಾರ ಇಲಾಖೆಯ ಕಾರ್ಯಗಳ ಜೊತೆಗೆ ತಾಲ್ಲೂಕು ಮಟ್ಟದಲ್ಲಿ ಎಲ್ಲಾ ಇಲಾಖೆಗಳ ಕೆಲಸ ಕಾರ್ಯಗಳನ್ನು ಸಹಾ ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಕೆಲವು ಬಾರಿ ಸಾಗಣಿಕೆ, ಸಹಯಧನ ಇನ್ನಿತರ ವೆಚ್ಚದ ಬಿಲ್ಲುಗಳನ್ನು ಧೃಡೀಕರಿಸಿ ಸಲ್ಲಿಸಲು ವಿಳಂಬವಾಗುವ ಸಾಧ್ಯತೆ ಇರುತ್ತದೆ.
ಸಹಾಯವಾಣಿ ಮತ್ತು ನಿಯಂತ್ರಣಾ ಕೊಠಡಿಯ ದೂರುಗಳನ್ನು ನಿಯಮಿತವಾಗಿ ವಿಲೇವಾರಿ ಮಾಡಲು ಆದ್ಯತೆ ಮೇರೆಗೆ ಇಲಾಖೆಯ ಕಡತಗಳನ್ನು ವಿಲೇವಾರಿ ಮಾಡಲು ದೈನಂದಿನ ಇಲಾಖೆಯ ಸಂಬಂಧಿಸಿದ ಕುಂದು ಕೊರತೆಗಳನ್ನು ನಿರ್ವಹಿಸಲು ಹಾಗೂ ಆಹಾರ ಧಾನ್ಯ ಸಗಟುಮಳಿಗೆ ಹಾಗೂ ನ್ಯಾಯಬೆಲೆ ಅಂಗಡಿಗಳ ನಿಗಧಿತ ಅವಧಿಯಲ್ಲಿ ತಪಾಸಣೆ ಕೈಗೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ. ಆದ್ದರಿಂದ ತಾಲ್ಲೂಕು ಹಂತದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳನ್ನು ತಾಲ್ಲೂಕು ಹಂತದ ಮುಖ್ಯಸ್ತರಾಗಿ ನೇಮಿಸುವುದರಿಂದ ಇಲಾಖೆಯ ಎಲ್ಲಾ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ತಾಲ್ಲೂಕು ಹಂತದಲ್ಲಿ ಎಂ.ಎಸ್.ಪಿ ಕಾರ್ಯ ಸಮರ್ಪಕವಾಗಿ ನಿರ್ವಹಿಸಲು ಪ್ರತ್ಯೇಕ ಡ್ರಾಯಿಂಗ್ ಆಫೀಸರ್ ನೇಮಿಸುವುದು ಅವಶ್ಯಕವಾಗಿರುತ್ತದೆ. ತಾಲ್ಲೂಕು ಮಟ್ಟದಲ್ಲಿ ಆಹಾರ ಇಲಾಖೆಯನ್ನು ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿಗೆ 01 ಸಹಾಯಕ ನಿರ್ದೇಶಕರ ಹುದ್ದೆಯನ್ನು ಹೊಸದಾಗಿ ಸೃಜಿಸುವುದು ಅವಶ್ಯಕವಾಗಿರುತ್ತದೆ. ಹಾಗೂ ಅವರ ಕಛೇರಿಗೆ ಅಗತ್ಯ ಸಿಬ್ಬಂದಿಯನ್ನು ಒದಗಿಸಬೇಕಾಗಿರುತ್ತದೆ ಎಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಪ್ರಸ್ತುತ ತಾಲೂಕು ಮಟ್ಟದ ಆಹಾರ ಇಲಾಖೆಯ ಮುಖ್ಯಸ್ಥರು ತಹಶೀಲ್ದಾರ್ ಆಗಿದ್ದು, ತಾಲೂಕು ಕಚೇರಿಯಲ್ಲಿಯೇ ಆಹಾರ ಇಲಾಖೆ ಪ್ರತ್ಯೇಕ ಶಾಕೆಯಾಗಿ ಕಾರ್ಯನಿರ್ವಹಿಸುತ್ತಿರುತ್ತಿದೆ. ಅದನ್ನು ಸಹಾಯ ನಿರ್ದೇಶಕರು ಹುದ್ದೆ ಸೃಜಿಸಿ, ಅವರ ಕೆಳಗೆ ಆಹಾರ ಶಿರಸ್ತೇದಾರರು, ಆಹಾರ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರನ್ನು ಪ್ರತಿ ತಾಲೂಕುಗೆ 1 ಹುದ್ದೆಯಂತೆ 238 ಸಹಾಯಕ ನಿರ್ದೇಶಕರ ಹುದ್ದೆಯನ್ನು ಹೊಸದಾಗಿ ಸೃಜಿಸಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.