ಬರೋಬ್ಬರಿ 30 ವರ್ಷಗಳ ಬಳಿಕ ಮತ್ತೆ ಪತ್ತೆಯಾದ ಐತಿಹಾಸಿಕ ಮಸೀದಿ

Prasthutha|

ಬಿಹಾರ: ಬರೋಬ್ಬರಿ 30 ವರ್ಷಗಳ ಕಾಲ ಅಣೆಕಟ್ಟಿನ ನೀರಿನಲ್ಲಿ ಮುಳುಗಿದ್ದ ಐತಿಹಾಸಿಕ ಮಸೀದಿಯೊಂದು ನೀರು ಖಾಲಿಯಾಗುತ್ತಲೇ ಮತ್ತೆ ಪತ್ತೆಯಾಗಿರುವ ಘಟನೆ ಬಿಹಾರದ ನವಾಡ ಜಿಲ್ಲೆಯಿಂದ ವರದಿಯಾಗಿದೆ. ಈ ಬೆಳವಣಿಗೆ ಜಿಲ್ಲೆಯ ಜನತೆಯನ್ನು ನಿಬ್ಬೆರಗಾಗಿಸಿದೆ.

- Advertisement -

ರಾಔಲಿ ಪ್ರಾಂತ್ಯದ ಪುಲ್ವಾರಿಯಾ ಅಣೆಕಟ್ಟಿನಲ್ಲಿ ಮೂರು ದಶಕದಿಂದ ನೀರಿನ ಅಡಿಯಲ್ಲಿ ಮುಳುಗಿದ್ದ ಐತಿಹಾಸಿಕ ಹಳೆಯ ಮಸೀದಿ ಇದೀಗ ಸಂಪೂರ್ಣವಾಗಿ ಪತ್ತೆಯಾಗಿದೆ. ಇದಕ್ಕೆ ಸಂಬಂಧಿಸಿದ ಸುದ್ದಿ ಊರಿಡಿ ಹರಡುತ್ತಿದ್ದಂತೆ ಇದನ್ನು ವೀಕ್ಷಿಸಲು ಮುಸ್ಲಿಮರು ಸೇರಿದಂತೆ ಅಕ್ಕಪಕ್ಕದ ಹಲವಾರು ಜನರು ಇಲ್ಲಿಗೆ ಬರುತ್ತಿದ್ದಾರೆ.

ಅಣೆಕಟ್ಟಿನ ನೀರಿನಲ್ಲಿ ಮುಳುಗಿ ದಶಕದ ಬಳಿಕವೂ ಮಸೀದಿಯ ಕಟ್ಟಡಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದೇ ಸುರಕ್ಷಿತವಾಗಿದೆ. ಫುಲ್ವಾರಿಯಾ ಅಣೆಕಟ್ಟಿನ ಚಂದೌಲಿ ಎಂಬಲ್ಲಿ ಈ ಮಸೀದಿ ಪತ್ತೆಯಾಗಿದೆ. ಈ ಮಸೀದಿ ನೂರಿ ಮಸೀದಿ ಎಂದು ಜನಮನ್ನಣೆ ಗಳಿಸಿದ್ದು, ಸುಮಾರು 120 ವರ್ಷಗಳ ಇತಿಹಾಸವಿದೆ ಎಂದು ಹಿರಿಯ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯ ಈ ಮಸೀದಿ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

- Advertisement -

ಫುಲ್ವಾರಿಯಾ ಅಣೆಕಟ್ಟನ್ನು 1984 ರಲ್ಲಿ ಕಟ್ಟಲಾಗಿದ್ದು, ಇಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಆ ಬಳಿಕ ಮಸೀದಿಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದೀಗ ಪತ್ತೆಯಾದ ಮಸೀದಿಯ ಸುತ್ತಲೂ ಕೆಸರು ತುಂಬಿದ್ದು, ಇದರ ಹತ್ತಿರಕ್ಕೆ ಹೋಗುವುದು ಕ್ಲಿಷ್ಟಕರವಾಗಿದೆ. ಹಲವಾರು ಮಂದಿ ತಮ್ಮ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಒಳಗೆ ಹೋಗಲು ಪ್ರಯತ್ನಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Join Whatsapp