ಕೊಲ್ಹಾಪುರ: ಸಂಘಪರಿವಾರದ ಕೆಲವು ಜನರು ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಹಾರಿಸಿರುವ ಘಟನೆ ರವಿವಾರ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವಿಶಾಲ್‌ಗಢ ಕೋಟೆಯ ಬಳಿ ಅತಿಕ್ರಮಣವಾಗಿದೆ ಎಂದು ಆರೋಪಿಸಿ ಮಾಜಿ ರಾಜ್ಯಸಭಾ ಸದಸ್ಯ ಸಂಭಾಜಿರಾಜೇ ಛತ್ರಪತಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದ ಬಳಿಕ ಈ ಘಟನೆ ನಡೆದಿದೆ.
ವಿಶಾಲ್‌ಗಢದಿಂದ ಕೆಲ ಕಿಲೋಮೀಟರ್ ದೂರದಲ್ಲಿರುವ ಗಜಪುರ್ ಗ್ರಾಮದಲ್ಲಿನ ಮಸೀದಿಯ ಮೇಲೆ ದಾಳಿ ನಡೆಸಿದ ಗುಂಪು, ಮುಸ್ಲಿಂ ಸಮುದಾಯದ ಮೇಲೆ ಹಲ್ಲೆಯನ್ನೂ ನಡೆಸಿದೆ ಎಂದೂ ವರದಿಯಾಗಿದೆ.
ದಾಳಿಯಲ್ಲಿ ಸುಮಾರು 40 ಮಂದಿ ಮುಸ್ಲಿಮರು ಗಾಯಗೊಂಡಿದ್ದು, ಮಕ್ಕಳ ಮೇಲೂ ಗುಂಪು ದಾಳಿ ನಡೆಸಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸ್ಥಳೀಯ ಎಐಎಂಐಎಂ ನಾಯಕ ಇಮ್ರಾನ್ ಸನದಿ ತಿಳಿಸಿದ್ದಾಗಿ ವರದಿಯಾಗಿದೆ.
ಅಲ್ಲಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದೆ. ಮನೆಗಳನ್ನೂ ನೆಲಸಮಗೊಳಿಸಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಜೀವಹಾನಿಯಾಗದಿದ್ದರೂ, ಹಲವರು ಗಾಯಗೊಂಡಿದ್ದಾರೆ. ಅವರು ದೊಣ್ಣೆ ಹಾಗೂ ಖಡ್ಗಗಳನ್ನು ಹಿಡಿದು ದಾಳಿ ನಡೆಸಿದ್ದಾರೆ. ಕೆಲವು ಪೊಲೀಸರೂ ಖಡ್ಗಗಳಿಂದ ದಾಳಿ ನಡೆಸಿದ್ದಾರೆ. ಮಸೀದಿಯೊಂದನ್ನು ಧ್ವಂಸಗೊಳಿಸಲಾಗಿದೆ ಹಾಗೂ ಅದಕ್ಕೆ ಬೆಂಕಿ ಹಚ್ಚಲಾಗಿದೆ. ಒಂದು ಬಗೆಯ ಅನಿಲ ಬಳಸಿ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ಇಮ್ರಾನ್ ದೂರಿದ್ದಾರೆಂದು ವರದಿಯಾಗಿದೆ.
ಅವರು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರನ್ನು ಅಮಾನುಷವಾಗಿ ಥಳಿಸಲಾಗಿದೆ. ಆರು ವರ್ಷದ ಮಗುವಿನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಘಟನೆಯ ಕೆಲವು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಕೆಲವು ಜನರು ಮಸೀದಿಯ ಗೋಡೆಗಳನ್ನೇರಿ ಮಸೀದಿಯ ಮೇಲೆ ಕೇಸರಿ ಧ್ವಜವನ್ನು ನೆಡುತ್ತಿರುವುದು ಹಾಗೂ ಕೊಡಲಿಯಿಂದ ಮಿನಾರುಗಳನ್ನು ಹೊಡೆದು ಹಾಕುತ್ತಿರುವುದು ವಿಡಿಯೊವೊಂದರಲ್ಲಿ ಕಂಡು ಬಂದಿದೆ. ಮತ್ತೊಂದು ವಿಡಿಯೊದಲ್ಲಿ ಗುಂಪೊಂದು ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಾ ಮಸೀದಿಯೊಳಗೆ ದಾಳಿ ನಡೆಸುತ್ತಿರುವುದು ಸೆರೆಯಾಗಿದೆ.
ದಾಳಿಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಐಎಂಐಎಂ ನಿಯೋಗವೊಂದು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.