ಸಮಸ್ಯೆಗಳನ್ನು ನಿವಾರಿಸದ, ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರವನ್ನು ಕಿತ್ತೊಗೆಯಬೇಕು: ಬಿ.ಟಿ. ಲಲಿತಾನಾಯ್ಕ್

Prasthutha|

ದಾವಣಗೆರೆ: ಕೋಮುಗಲಭೆ, ಬೆಲೆ ಏರಿಕೆ, ಬೆಳೆ ಹಾನಿ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗೆ ಮುಂದಾಗದೆ ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಜನತಾ ಪಾರ್ಟಿಯ ರಾಜ್ಯಾಧ್ಯಕ್ಷೆ ಬಿ.ಟಿ. ಲಲಿತಾನಾಯ್ಕ್ ಆಗ್ರಹಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿನ್ನುವ ಆಹಾರದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಎಸ್ಟಿ ಹಾಕಿದೆ. ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ಬೆಲೆ ವಿಪರೀತ ಏರಿಕೆಯಾಗಿ ಬಡವರು ಜೀವನ ನಡೆಸುವುದು ಕಷ್ಟವಾಗಿದೆ. ಹಿಂದೆ ಸರ್ಕಾರಗಳು ರಾಷ್ಟ್ರೀಕರಣ ಮಾಡುತ್ತಿದ್ದವು. ಈಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಬ್ಯಾಂಕ್, ರೈಲ್ವೆ ಸಹಿತ ಎಲ್ಲವನ್ನು ಖಾಸಗಿ ಉದ್ಯಮಿಗಳಿಗೆ ನೀಡಲಾಗಿದೆ ಎಂದರು.

ಜನತಾ ಪಾರ್ಟಿಯು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕೋಟ್ಯಂತರ ರೂಪಾಯಿ ಸುರಿದು ಚುನಾವಣೆ ಗೆಲ್ಲುವವರು ನಮಗೆ ಬೇಡ. ಪ್ರಾಮಾಣಿಕವಾಗಿ ಕೆಲಸ ಮಾಡುವವರು ಬೇಕು. ಜಯಪ್ರಕಾಶ ನಾರಾಯಣ ಅವರ ಸಿದ್ಧಾಂತವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

- Advertisement -

ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 50 ಹೊಸ ತಾಲ್ಲೂಕುಗಳನ್ನು ಮಾಡಲಾಗುವುದು. ದಾವಣಗೆರೆಯಲ್ಲಿ  ಆನಗೋಡು ಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ. ಗುರುಮೂರ್ತಿ, ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಅಬ್ದುಲ್ ಬಶೀರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಆರ್. ಕರಿಯಪ್ಪ, ಜಿಲ್ಲಾಧ್ಯಕ್ಷ ಕೆ.ಎಸ್. ರೇವಣ ಸಿದ್ದಪ್ಪ ಮುಂತಾದವರು ಉಪಸ್ಥಿತರಿದ್ದರು.



Join Whatsapp