ರಾಜಧರ್ಮ ಮರೆತ ಸರ್ಕಾರ! ಗಲಭೆ ಸಂತ್ರಸ್ತರ ಗೋಳು ಕೇಳೋರಿಲ್ಲ

Prasthutha|

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಆಗಿ ಇಂದಿಗೆ 16 ದಿನಗಳೇ ಕಳೆದಿವೆ. ಪ್ರಕರಣ ಸಂಬಂಧ ಪೊಲೀಸರು ಇದುವರೆಗೂ 10 ಜನರನ್ನು ಬಂಧಿಸಿದ್ದಾರೆ. ಹರ್ಷನ ಹತ್ಯೆಯ ಹಿನ್ನೆಲೆಯಲ್ಲಿ ನಗರದಲ್ಲಿ ಕೋಮುಗಲಭೆ ಸೃಷ್ಟಿಯ ಎಲ್ಲ ಹುನ್ನಾರಗಳನ್ನು ಈ ಹೊತ್ತಿನವರೆಗೂ ಪೊಲೀಸ್ ಇಲಾಖೆ ವಿಫಲಗೊಳಿಸಿದೆ ಎಂಬುದು ಒಂದು ಸಮಾಧಾನಕರ ಸಂಗತಿ, ಆದರೆ ಮತ್ತೆ ಮತ್ತೆ ಹರ್ಷನ ಹತ್ಯೆ, ಹಿಜಾಬ್ ಪ್ರಕರಣಗಳನ್ನು ಮುಂದಿಟ್ಟುಕೊಂಡು ನಗರದಲ್ಲಿ ಕೋಮು ಸಾಮರಸ್ಯ ಕದಡುವ ಸಂಚು ಮುಂದುವರೆದಿವೆಯಾ ಎಂಬ ಆತಂಕ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದ್ದರೆ, ಇತ್ತ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಗಲಭೆಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸದೆ ’ರಾಜಧರ್ಮ’ ವನ್ನು ಧಿಕ್ಕರಿಸಿ ಮುನ್ನಡೆದಿರುವುದು ಅಂಗೈ ಹುಣ್ಣಿನಂತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಪದ್ಮಾ ಟಾಕೀಸ್ ಬಳಿ ವೆಂಕಟೇಶ್ ಎಂಬಾತನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿ ಗಾಯಗೊಳಿಸಿದ್ದಾರೆ ಎನ್ನಲಾದ ಪ್ರಕರಣ ವೈಯಕ್ತಿಕ ಜಗಳವಾಗಿದ್ದು, ಇದಕ್ಕೂ ಕೋಮು ಬಣ್ಣ ಬಳಿಯಲು ಪ್ರಯತ್ನವೂ ನಡೆಯಿತು. ಭಿನ್ನ ಧರ್ಮಿಯರಿಬ್ಬರ ನಡುವಿನ ವೈಯಕ್ತಿಕ ಜಗಳಗಳೂ ಕೋಮುದ್ವೇಷದ ಸ್ವರೂಪಕ್ಕೆ ತಿರುಗಿ ಯಾವ ಹೊತ್ತಿನಲ್ಲಿ ಏನಾಗಿಬಿಡುತ್ತದೆಯೋ ಎಂಬಷ್ಟು ಪರಿಸ್ಥಿತಿ ಸೂಕ್ಷ್ಮವಾಗಿದೆ.

- Advertisement -

ಒಂದು ಧರ್ಮದ ಸಮುದಾಯದ ವಿರುದ್ದ ಬಹುಸಂಖ್ಯಾತರೊಳಗೆ ದ್ವೇಷದ ’ಅಭಿಪ್ರಾಯ ಉತ್ಪಾದನೆ’ ಮಾಡುವ ಸನ್ನಿವೇಶಗಳು ನೆಲೆಗೊಳ್ಳುತ್ತಿರುವುದು ಭವಿಷ್ಯದಲ್ಲಿ ಸೌಹಾರ್ದತೆಗೆ ದೊಡ್ಡ ಅಪತ್ತೊಂದು ಕಾದಿದೆ ಎಂಬ ಅಪಶಕುನದಂತಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಆಡಳಿತ ರೂಢ ಪಕ್ಷದ ಶಾಸಕರು, ಸಚಿವರು, ಸಂಸದರ ವರ್ತನೆಗಳೇ ನಗರದ ಶಾಂತಿ -ಸೌಹಾರ್ದತೆಗೆ ಧಕ್ಕೆಯಾಗುವಂತಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲು. ಒಂದು ಹಂತದಲ್ಲಿ ಜಿಲ್ಲಾಡಳಿತ ಸರ್ಕಾರದ ಕೈಕೊಂಬೆಯಂತೆ ವರ್ತಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆ.ಶಾಂತಿಯನ್ನು ಕಾಪಾಡಬೇಕಾದ ಅಧಿಕಾರದಂಡ ಹಿಡಿದವರೆ ಪ್ರಚೋದನಾಕಾರಿಯಾಗಿ, ಮತೀಯ ಭಾವನೆಗಳನ್ನು ಕೆರಳಿಸುವಂತೆ ಮಾತನಾಡುತ್ತಿರುವುದು, ಧರ್ಮದ ಹೆಸರಲ್ಲಿ ಜನರನ್ನು ಬಗೆದು ನೋಡುತ್ತಿರುವುದು ಜಿಲ್ಲಾಡಳಿತದ ನೈತಿಕ ಸ್ಥೈರ್ಯ ಮತ್ತು ಆಡಳಿತಾತ್ಮಕ ಧೈರ್ಯವನ್ನೆ ಕಸಿದುಕೊಂಡಂತಿದೆ. ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ.ರೂ ಗಳ ಪರಿಹಾರ ನೀಡಿದೆ. ಆಡಳಿತ ರೂಢ ಬಿಜೆಪಿ ಶಾಸಕರು, ಸಂಸದರು, ಮಠಾಧೀಶರು, ಸಂಘ-ಸಂಸ್ಥೆಗಳು ವೈಯಕ್ತಿಕ ನೆಲೆಯಲ್ಲಿ ಹರ್ಷನ ಕುಟುಂಬಕ್ಕೆ ನೀಡಿರುವ ಪರಿಹಾರ ಮೊತ್ತವೇ ಕೋಟಿಗಳ ದಾಟುತ್ತಿದೆ. ಆದರೆ ಹರ್ಷನ ಶವ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳ ದಾಳಿಗೊಳಗಾಗಿ ಮನೆ, ವಾಹನಗಳು , ಗೂಡಂಗಡಿಗಳನ್ನು ಕಳೆದುಕೊಂಡು ನಿರ್ಗತಿಕರಂತಾಗಿರುವ ಜನಸಮುದಾಯವನ್ನು ಯಾರೂ ಕೇಳದಂತಾಗಿದೆ.

ಹರ್ಷನ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರ ಕೊಟ್ಟು ಬೆನ್ನು ತಟ್ಟಿಕೊಳ್ಳುತ್ತಿರುವ ರಾಜ್ಯಸರ್ಕಾರ ಗಲಭೆಯಲ್ಲಿ ಬದುಕಿಗೆ ಆಧಾರವಾಗಿದ್ದ ಇದ್ದೊಂದು ಗೂಡಂಗಡಿ ಕಳೆದುಕೊಂಡು ಬೀದಿಪಾಲಾಗಿರುವವರಿಗೆ ಕನಿಷ್ಠ ಪರಿಹಾರವನ್ನಾದರೂ ಕೊಡುವ ರಾಜಧರ್ಮ ಪರಿಪಾಲಿಸದಿರುವುದು, ಸಂತ್ರಸ್ತರ ಕಡೆಗೆ ಕಿರುಗಣ್ಣಿನಿಂದಲೂ ನೋಡದಿರುವುದು ಘೋರ ವಿಪರ್ಯಾಸ. ಸಂವಿಧಾನದ ಮೂಲತತ್ವಗಳ ಪ್ರತಿಜ್ಞೆಗನುಗುಣವಾಗಿ ನಡೆದುಕೊಳ್ಳಬೇಕಾಗಿದ್ದ ನಾಗರೀಕ ಸರ್ಕಾರವೊಂದು ಪಕ್ಷ ಸಿದ್ದಾಂತಕ್ಕೆ ಕಟ್ಟು ಬಿದ್ದು ಪಕ್ಷಪಾತಿಯಂತೆ ವರ್ತಿಸುವುದು ಜನದ್ರೋಹವಲ್ಲವೆ? ಆಡಳಿತ ರೂಢ ಪಕ್ಷದ ಸಚಿವರು, ಶಾಸಕರು, ಸಂಸದರು ಪ್ರತಿದಿನ ಒಂದಲ್ಲ ಒಂದು ನೆಪದಲ್ಲಿ ಹರ್ಷನ ಮನೆಗೆ ಭೇಟಿ ನೀಡುತ್ತಾ ಪ್ರಕರಣವನ್ನು ಜೀವಂತವಾಗಿಡುವಲ್ಲಿ ಶ್ರಮವಹಿಸುತ್ತಿದ್ದಾರೆ. ಇದರ ಹಿಂದೆ ಮತರಾಜಕಾರಣದ ಒತ್ತಾಸೆಗಳಿರುವುದನ್ನು ಅಲ್ಲೆಗೆಳೆಯಲಾಗದು. ಆದರೆ ಗಲಭೆಯಲ್ಲಿ ಸಂತ್ರಸ್ತರಾದ ಅಲ್ಪಸಂಖ್ಯಾತರ ಬಡಾವಣೆಗಳಿಗೆ ಭೇಟಿ ನೀಡಿ ಅವರ ನಷ್ಟ, ಕಷ್ಟ, ಕಣ್ಣೀರನ್ನು ಸರ್ಕಾರದ ಭಾಗವಾಗಿರುವವರು ಆಲಿಸದೇ ಇರುವುದು ಅಧರ್ಮವಲ್ಲವೆ? ಹರ್ಷ ಕೊಲೆ ಪ್ರಕರಣದ ಬೆನ್ನಲ್ಲಿ ನಡೆದ ಗಲಭೆಗಳಿಂದ ತಳ್ಳುಗಾಡಿಗಳು, ಹಣ್ಣಿನ ಮಾರಾಟ ಮಳಿಗೆಗಳು, ಮನೆಗಳಿಗೆ ಹಾನಿಯಾಗಿದ್ದರೆ, ಬೈಕು,ಆಟೋ ಗಳು , ಕಾರುಗಳು ಸೇರಿದಂತೆ ಅನೇಕ ವಾಹನಗಳು ಬೆಂಕಿಗಾಹುತಿಯಾಗಿವೆ. ಸುಮಾರು 10 ಕೋ.ರೂ. ಗಳಿಗೂ ಹೆಚ್ಚಿನ ಆಸ್ತಿ-ಪಾಸ್ತಿ ನಷ್ಟವಾಗಿದೆ. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ದೂರಿನ ಪ್ರಕಾರ 3ರಿಂದ 4 ಕೋಟಿ ರೂ.ಗಳು ಹಾನಿಯಾಗಿದೆ.

- Advertisement -

 ಆದರೆ ಬಹಳಷ್ಟು ಜನ ಭಯದಿಂದಲೆ ಪೊಲೀಸ್ ದೂರು ನೀಡಲು ಮುಂದೆ ಬರುತ್ತಿಲ್ಲ. ಇದರಿಂದ ಹೆಚ್ಚಿನ ಪ್ರಮಾಣದ ಹಾನಿಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಮೃತ ಹರ್ಷನ ಮನೆಗೆ ಭೇಟಿ ನೀಡುತ್ತಿರುವ ಅಧಿಕಾರಸ್ಥರು, ಮಠಾಧಿಪತಿಗಳು, ಸಂಘ-ಸಂಸ್ಥೆಗಳ ಮಾತಿರಲಿ, ಸರ್ಕಾರದ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಲಭೆಯಿಂದ ಹಾನಿಗೊಳಗಾದ ಪ್ರದೇಶಗಳಿಗೂ ಭೇಟಿ ಸಂತ್ರಸ್ತರಿಗೆ ಧೈರ್ಯ ತುಂಬುವ ಅಥವಾ ಅವರಿಗೆ ಪರಿಹಾರ ಒದಗಿಸುವ ಯಾವ ಹೊಣೆಗಾರಿಕೆಯನ್ನು ತೋರುತ್ತಿಲ್ಲ. ಇದರಿಂದ ಸಂತ್ರಸ್ತ ಸಮುದಾಯ ಒಂದಡೆ ಸರ್ಕಾರದ ಅಸಡ್ಡೆಗೆ ತುತ್ತಾಗಿದ್ದರೆ ಮತ್ತೊಂದೆಡೆ ಮತೀಯ ಸಂಘರ್ಷದ ಭಯದಲ್ಲಿ ಬದುಕುವಂತಾಗಿದೆ. ಸಂವಿಧಾನಿಕ ಹುದ್ದೆಯಲ್ಲಿರುವವರೆ. ಆಡಳಿತ ಪಕ್ಷದ ಬೆಂಬಲಿಗರೇ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಇಂತಹ ಭಯ, ಆತಂಕಗಳಿಗೆ ಕಾರಣವಾಗಿರುವುದು ಗುಟ್ಟಾಗಿ ಉಳಿದಿಲ್ಲ. ವಿಪಕ್ಷಗಳು ಕೂಡ ಬಿಜೆಪಿಯ ಮತರಾಜಕಾರಣ ಮುಂದೆ ನೆಲಕಚ್ಚಿ ಹೋಗಿವೆ. ಕಾಂಗ್ರೆಸ್ ಪಕ್ಷವಾಗಲಿ, ಅದರ ಮುಖಂಡರುಗಳಾಗಲಿ ಅಲ್ಪಸಂಖ್ಯಾತ ಸಂತ್ರಸ್ತರ ವಿಷಯದಲ್ಲಿ ಸರ್ಕಾರ ಅನುಸರಿಸುತ್ತಿರುವ ತಾರತಮ್ಯವನ್ನು, ಜನಾಂಗದ್ವೇಷವನ್ನು ಖಂಡಿಸುವ ಕನಿಷ್ಠ ಹೊಣೆಗಾರಿಕೆಯನ್ನು ತೋರದಿರುವುದು ನಾಚಿಕೆಗೇಡಿನ ಸಂಗತಿ. ಪೊಲೀಸ್ ಇಲಾಖೆ ಹರ್ಷನ ಹತ್ಯೆ ಸಂಬಂಧಿಸಿದಂತೆ ಬಹುತೇಕ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನುಬಾಹಿರ ಸಂಘಟಿತ ಅಪರಾಧತಡೆ ಕಾಯ್ದೆಯ ಅಸ್ತ್ರವನ್ನೆ ಬಳಸಿದೆ. ಇಷ್ಟಾದರೂ ಆಡಳಿತ ಪಕ್ಷದ ಬೆಂಬಲಿಗ ಸಂಘಟನೆಗಳೇ ಪ್ರತಿಭಟನೆ ನೆಪದಲ್ಲಿ ಬೀದಿಗಿಳಿಯುತ್ತಿರುವುದರ ಉದ್ದೇಶ ಏನು ಎಂಬುದರ ಬಗ್ಗೆ ಜಿಲ್ಲಾಡಳಿತ ಎಚ್ಚರವಹಿಸಬೇಕು.

Join Whatsapp