ಬೆಂಗಳೂರು: ಕಾಣೆಯಾಗಿದ್ದ ಹಸು ಹುಡುಕಿಕೊಂಡು ಕಾಡಿಗೆ ಹೋದ ರೈತರೊಬ್ಬರು ಕಾಡಾನೆಯ ದಾಳಿಗೆ ಸಿಲುಕಿ ಬಲಿಯಾಗಿರುವ ದುರ್ಘಟನೆ ಬನ್ನೇರುಘಟ್ಟ ಸಮೀಪದ ಸೊಳ್ಳೆಪುರ ದೊಡ್ಡಿ ಬಳಿ ನಡೆದಿದೆ.
ಸೊಳ್ಳೆಪುರ ದೊಡ್ಡಿ ಗ್ರಾಮದ ಅಲಗಪ್ಪ (50) ಮೃತಪಟ್ಟಿರುವ ರೈತ. ಅಲಗಪ್ಪ ಪ್ರತಿ ದಿನ ಬೆಳಗ್ಗೆ ಹಸುಗಳನ್ನು ಮೇಯಿಸಲು ಕಾಡಂಚಿಗೆ ಹೋಗುತ್ತಿದ್ದು, ಮೂರು ದಿನಗಳ ಹಿಂದೆ ಎಂದಿನಂತೆ ಜಾನುವಾರುಗಳನ್ನು ಮೇಯಿಸಲು ಹೋಗಿದ್ದಾಗ ಹಸುವೊಂದು ಕಾಣೆಯಾಗಿತ್ತು.
ಅದನ್ನು ಹುಡುಕಿಕೊಂಡು ನಿನ್ನೆ ಕಾಡಿನ ಸಮೀಪ ಹೋಗಿದ್ದಾರೆ. ಈ ವೇಳೆ ಕಾಡಾನೆ ದಾಳಿಗೆ ತುತ್ತಾಗಿ ಸ್ಥಳದಲ್ಲಿಯೇ ರೈತ ಅಲಗಪ್ಪ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಜಾನುವಾರುಗಳನ್ನು ಮೇಯಿಸಲು ಹೋದ ಅಲಗಪ್ಪ ಮನೆಗೆ ಬಾರದೆ ಇದ್ದಾಗ ಎಲ್ಲೆಡೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದರಾದರೂ ಪತ್ತೆಯಾಗಿರಲಿಲ್ಲ.
ಹಾರೋಹಲ್ಲಿ ಬೀಟ್ ಗುಲ್ಲೆಟ್ಟಿ ಕಾವಲ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗೆ ನಿನ್ನೆ ಸಂಜೆ ಮೃತದೇಹ ಸಿಕ್ಕಿದ್ದು, ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಬನ್ನೇರುಘಟ್ಟ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಬನ್ನೇರುಘಟ್ಟ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.