ವಿದ್ಯಾರ್ಥಿಯನ್ನು ಥಳಿಸಿ ಹತ್ಯೆಗೈದ 20 ಸಹಪಾಠಿಗಳಿಗೆ ಮರಣ ದಂಡನೆ ಶಿಕ್ಷೆ

Prasthutha|

ಢಾಕಾ: ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ಕ್ರಮವನ್ನು ಟೀಕೆ ಮಾಡಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಪು ನೀಡಿರುವ ಬಾಂಗ್ಲಾದೇಶದ ನ್ಯಾಯಾಲಯವೊಂದು, ಕೃತ್ಯದಲ್ಲಿ ಭಾಗಿಯಾದ 20 ವಿದ್ಯಾರ್ಥಿಗಳಿಗೆ ಮರಣದಂಡನೆ ಹಾಗೂ ಐವರು ವಿದ್ಯಾರ್ಥಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

- Advertisement -

ಪ್ರತಿಷ್ಠಿತ ಬಾಂಗ್ಲಾದೇಶ ಇಂಜಿನಿಯರಿಂಗ್​ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯ (BUET)ದ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದ 21 ವರ್ಷದ ಅಬ್ರಾರ್​ ಫಹದ್​’ನನ್ನು, ಡಿಸೆಂಬರ್ 7, 2019ರಂದು ವಿದ್ಯಾರ್ಥಿಗಳ ಗುಂಪೊಂದು ಕ್ರೂರವಾಗಿ ಥಳಿಸಿ ಹತ್ಯೆಗೈಯ್ದಿದ್ದರು. ಭಾರತದೊಂದಿಗೆ ನೀರು ಹಂಚಿಕೆ ಒಪ್ಪಂದಕ್ಕಾಗಿ ಸಹಿ ಹಾಕಿದ್ದ ಅಂದಿನ ಪ್ರಧಾನಿ ಶೇಖ್​ ಹಸೀನಾರ ನಡೆಯನ್ನು ಟೀಕಿಸಿ, ಅಬ್ರಾರ್​ ಫಹದ್ ಫೇಸ್​ಬುಕ್​’ನಲ್ಲಿ ಪೋಸ್ಟ್​ ಹಾಕಿದ್ದ. ಇದಾದ ಕೆಲವೇ ಗಂಟೆಗಳಲ್ಲಿ  ಫಹದ್​’ನ ಮೃತದೇಹವು ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಪತ್ತೆಯಾಗಿತ್ತು.

ಬಾಂಗ್ಲಾದೇಶದ ಆಡಳಿತರೂಢ ಅವಾಮಿ ಲೀಗ್​​ನ ವಿದ್ಯಾರ್ಥಿ ಸಂಘಟನೆಯಾದ ಛಾತ್ರಾ ಲೀಗ್’​​ನ ಸದಸ್ಯರಾಗಿದ್ದ 25 ವಿದ್ಯಾರ್ಥಿಗಳು ಸುಮಾರು ಆರು ಗಂಟೆಗಳ ಕಾಲ ಕ್ರಿಕೆಟ್​ ಬ್ಯಾಟ್​ ಹಾಗೂ ಇತರೆ ಆಯುಧಗಳಿಂದ ಅಬ್ರಾರ್​ ಫಹದ್​​ನನ್ನು ಥಳಿಸಿದ್ದರು.

- Advertisement -

ತೀರ್ಪು ಪ್ರಕಟಿಸಿದ ಢಾಕಾ ತ್ವರಿತ ವಿಚಾರಣೆ ನ್ಯಾಯಮಂಡಳಿ-1 ನ್ಯಾಯಾಧೀಶ ಅಬು ಝಫರ್ ಮುಹಮ್ಮದ್, ನ್ಯಾಯಾಲಯವು ಅಪರಾಧಿಗಳಿಗೆ ಗರಿಷ್ಠ ಶಿಕ್ಷೆಯನ್ನೇ ವಿಧಿಸಿದೆ. ಇಂತಹ ಘಟನೆಗಳು ಇನ್ನೆಂದಿಗೂ ನಡೆಯದಿರಲು ಈ ತೀರ್ಪು ಸಹಕಾರಿಯಾಗಲಿದೆ ಎಂದು ಹೇಳಿದರು. ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಮೃತ ಫಹದ್ ತಂದೆ ಬರ್ಖತ್ ಉಲ್ಲಾ, ನನ್ನ ಮಗನನ್ನು ಮರಳಿ ಪಡೆಯಲು ಸಾಧ್ಯವಿಲ್ಲ, ಆದರೆ ಈ ತೀರ್ಪು ನನ್ನ ಕುಟುಂಬಕ್ಕೆ ಸಾಂತ್ವನ ನೀಡಲಿದೆ. ಈ ಆದೇಶದಿಂದ ನಾನು ತೃಪ್ತನಾಗಿದ್ದೇನೆ. ಶೀಘ್ರದಲ್ಲೇ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ನಂಬಿದ್ದೇನೆ ಎಂದು ಹೇಳಿದರು.

Join Whatsapp