ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ವಿಮರ್ಶಿಸಿದ ದಲಿತ ವ್ಯಕ್ತಿಯನ್ನು ಎಳೆದೊಯ್ದು ದೇವಸ್ಥಾನದ ನೆಲದಲ್ಲಿ ಮೂಗು ತಿಕ್ಕಿಸಿ ದೌರ್ಜನ್ಯ !

Prasthutha|

►ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಹೀಗೊಂದು ಅಮಾನವೀಯ ಘಟನೆ

- Advertisement -

ಅಲ್ವಾರ್: ಪ್ರಜಾಪ್ರಭುತ್ವ ದೇಶ ಎಂಬ ಹೆಮ್ಮೆಯು ದಿನ ಕಳೆದಂತೆ ಪ್ರಶ್ನಾರ್ಥಕ ಚಿಹ್ನೆಯಾಗಿ ಮೂಡುವ ಘಟನಾವಳಿಗೆ ಮಗದೊಮ್ಮೆ ನಮ್ಮ ದೇಶ ಸಾಕ್ಷಿಯಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಎಂಬ ಬಾಲಿವುಡ್ ಸಿನಿಮಾದಲ್ಲಿ ಪಂಡಿತರ ಮೇಲೆ ದೌರ್ಜನ್ಯ ನಡೆದಿರುವುದನ್ನು ತೋರಿಸಿದ್ದೀರಿ, ಹಾಗಾದರೆ ದಲಿತರ ಮೇಲೆ ನಡೆದಿರುವ ದೌರ್ಜನ್ಯ ನಡೆದಿಲ್ಲವೇ’ ಎಂದು ಪ್ರಶ್ನಿಸಿದ ದಲಿತ ಯುವಕನ ಮೇಲೆ ಕೆಂಗಣ್ಣು ಬೀರಿದ ಮೇಲ್ವರ್ಗದ ದುಷ್ಕರ್ಮಿಗಳು, ಆತನ ಮೇಲೆ ಮುಗಿಬಿದ್ದು, ಕೂಗಾಡಿ, ಎಳೆದಾಡಿ ಕ್ರೌರ್ಯ ಮೆರೆದು ವಿಕೃತ ಸಂತೋಷ ಮೆರೆದಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬೆಹ್ರೂರ್ ಪಟ್ಟಣದಲ್ಲಿ ಘಟನೆ ನಡೆದಿದೆ.

ರಾಜೇಶ್ ಕುಮಾರ್ ಮೇಘಾವಲ್ ಎಂಬ ಯುವಕ ದಲಿತರ ಮೇಲಿನ ದೌರ್ಜನ್ಯವನ್ನು ಪ್ರಶ್ನಿಸಿದ ಕಾರಣವನ್ನೇ ಮುಂದಿಟ್ಟುಕೊಟ್ಟು ಗ್ರಾಮಸ್ಥರು, ಬೆಹ್ರೂರ್ ಪಟ್ಟಣದ ದೇವಾಲಯವೊಂದಕ್ಕೆ ಮೇಘಾವಲ್’ನನ್ನು ಎಳೆದೊಯ್ದು ದೇವಸ್ಥಾನದ ನೆಲಕ್ಕೆ ಬಲವಂತವಾಗಿ ಮೂಗನ್ನು ತಿಕ್ಕಿಸಿದ್ದಾರೆ. 

- Advertisement -

 ಯಾಕಾಯ್ತು..!?

ಕೆಲ ದಿನಗಳ ಹಿಂದಷ್ಟೇ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಕುರಿತು ಫೇಸ್’ಬುಕ್’ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ರಾಜೇಶ್ ಕುಮಾರ್ ಮೇಘಾವಲ್, ದೌರ್ಜನ್ಯಗಳು ಕೇವಲ ಕಾಶ್ಮೀರದ ಪಂಡಿತರ ಮೇಲಷ್ಟೇ ನಡೆದಿದೆಯೇ, ದಲಿತರ ಮೇಲೆ ಈ ದೇಶದಲ್ಲಿ ದೌರ್ಜನ್ಯಗಳಾಗಿಲ್ಲವೇ ಎಂದು ಪ್ರಶ್ನಿಸಿದ್ದರು.

ಆದರೆ ರಾಜೇಶ್ ಅವರ ಅಭಿಪ್ರಾಯಕ್ಕೆ ಸಂಘಪರಿವಾರದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ರಾಜೇಶ್ ಪೋಸ್ಟ್’ನ ಕೆಳಗಡೆ ಜೈಶ್ರೀರಾಮ್, ಜೈ ಶ್ರೀಕೃಷ್ಣ ಎಂಬ ಪ್ರತಿಕ್ರಿಯೆಗಳು ಬಂದಿದ್ದವು. ವಿರೋಧಗಳು ಹೆಚ್ಚಾಗುತ್ತಿದ್ದಂತೆ ತನ್ನ ಪೋಸ್ಟ್’ಅನ್ನು ಅಳಿಸಿ ಹಾಕಿದ್ದ ರಾಜೇಶ್ ಕುಮಾರ್, ಕ್ಷಮೆಯಾಚನೆಯನ್ನೂ ಮಾಡಿದ್ದರು. ಆದರೂ ತೃಪ್ತರಾಗದ ಸಂಘಪರಿವಾರದ ಗುಂಡಾಗಳು ರಾಜೇಶ್ ಮೇಲೆ ಅಮಾನವೀಯ ದೌರ್ಜನ್ಯ ಎಸಗಿದ್ದಾರೆ.

7 ಮಂದಿ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳ ಪೈಕಿ 7 ಮಂದಿಯನ್ನು ಬಂಧಿಸಲಾಗಿದ್ದು, ಇವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಹಾಗೂ ಇನ್ನಿತರ ಐಪಿಸಿ ಸೆಕ್ಷನ್’ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಭಿವಾಡಿ ಪೊಲೀಸ್ ವರಿಷ್ಠಾಧಿಕಾರಿ ಶಾಂತನು ಕುಮಾರ್ ತಿಳಿಸಿದ್ದಾರೆ.

 ಇದೊಂದು ಗಂಭೀರವಾದ ವಿಚಾರವಾಗಿದ್ದು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಕೃತ್ಯಗಳನ್ನು ಸಹಿಸಲಾಗದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಶಾಂತನು ಕುಮಾರ್ ತಿಳಿಸಿದ್ದಾರೆ.



Join Whatsapp