ಹಾಳಾದ ವಾಹನಗಳ ಬಿಡಿಭಾಗಗಳಿಂದ ಭಾರೀ ಗಾತ್ರದ ವೀಣೆ ತಯಾರಿಸಿದ ಕಲಾವಿದರ ತಂಡ

Prasthutha|

ಭೋಪಾಲ್‌: ನಗರದ ಕಲಾವಿದರ ತಂಡವೊಂದು ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ಜೋಡಿಸಿ ಒಂದು ರುದ್ರ ವೀಣೆಯನ್ನು ತಯಾರಿಸಿದ್ದಾರೆ.

- Advertisement -

ಭೋಪಾಲ್ ನಗರದ ಜನನಿಬಿಡ ಪ್ರದೇಶದಲ್ಲಿ ‘ವೇಸ್ಟ್ ಟು ವಂಡರ್’ ಎಂಬ ಹೆಸರಿನ ರುದ್ರ ವೀಣೆಯನ್ನು ಸ್ಥಾಪಿಸಲಾಗಿದೆ.

‘ಮೂರು ಆರ್ ಗಳು-ರೆಡ್ಯೂಸ್, ರೀಯೂಸ್ ಮತ್ತು ರಿಸೈಕಲ್‌ಗಳಿಗೆ ನಾವು ಇನ್ನೆರಡು ಆರ್‌ಗಳನ್ನು ಸೇರಿಸಿದ್ದೇವೆ; ರಿಡಿಸ್ಟ್ರಿಬ್ಯೂಷನ್ ಮತ್ತು ರೆಸ್ಪಾನ್ಸಿಬಿಲಿಟಿ!’ ಎಂದು ರುದ್ರವೀಣೆಯನ್ನು ವಿನ್ಯಾಸಗೊಳಿಸಿದ ಕಲಾವಿದರಲ್ಲಿ ಒಬ್ಬರಾಗಿರುವ ಪವನ್ ದೇಶಪಾಂಡೆ ಮಾಹಿತಿ ನೀಡಿದ್ದಾರೆ.

- Advertisement -

15 ಜನರಿರುವ ಕಲಾವಿದರ ತಂಡವು ರುದ್ರ ವೀಣೆಯನ್ನು ತಯಾರಿಸಲು ಐದು ಟನ್ ತ್ಯಾಜ್ಯವನ್ನು ಸಂಗ್ರಹಿಸಿದ್ದಾರಂತೆ. ಅವುಗಳಲ್ಲಿ ಹೆಚ್ಚಿನವು ಹಳೆಯ ವಾಹನಗಳ ಅನುಪಯುಕ್ತ ವಸ್ತುಗಳು. ಅವುಗಳನ್ನು ಬಳಸಿ 10 ಅಡಿ ಅಗಲ, 12 ಅಡಿ ಎತ್ತರ ಹಾಗೂ 28 ಅಡಿ ಉದ್ದದ ರುದ್ರ ವೀಣೆ ತಯಾರಿಸಲಾಗಿದೆ. ತಮ್ಮ ತಂಡವು ಈಗಾಗಲೇ ತ್ಯಾಜ್ಯದಿಂದ ಅನೇಕ ಉಪಯುಕ್ತ ವಸ್ತುಗಳನ್ನು ತಯಾರಿಸಿದೆ ಎಂದು ಪವನ್ ದೇಶಪಾಂಡೆ ಹೇಳುತ್ತಾರೆ. ಈ ಬಾರಿ ಭಾರತೀಯ ವಾದ್ಯಗಳನ್ನು ತಯಾರಿಸುವುದು ಅವರ ಉದ್ದೇಶವಾಗಿತ್ತು.

‘ಏನು ತಯಾರಿಸುವುದು ಅಂತ ಇಡೀ ತಂಡದ ಸದಸ್ಯರು ಒಂದೆಡೆ ಕೂತು ಯೋಚನೆ ಮಾಡಿದಾಗ ನಮಗೆ ಹೊಳೆದದ್ದು ಮುಂದಿನ ಪೀಳಿಗೆಗೆ ನೆನಪಿನಲ್ಲಿ ಉಳಿಯುವಂಥ ರುದ್ರ ವೀಣೆಯನ್ನು ತಯಾರು ಮಾಡುವ ಯೋಜನೆ. ವೀಣೆ ಕ್ರಮೇಣವಾಗಿ ನಮ್ಮ ಸ್ಮೃತಿಪಟಲದಿಂದ ದೂರವಾಗುತ್ತಿದೆ. ನಮ್ಮ ಭಾರತೀಯ ಸಂಪ್ರದಾಯ, ಪುರಾಣಗಳಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಸರಸ್ವತಿಯ ಸಂಗೀತ ವಾದ್ಯ ಇದು. ಲತಾ ಮಂಗೇಶ್ಕರ್ ಜೀ ಅವರಿಗೆ ಸಮರ್ಪಿಸುವ ಉದ್ದೇಶದಿಂದ ನಾವು ಈ ರುದ್ರ ವೀಣೆಯನ್ನು ತಯಾರಿಸಿದ್ದೇವೆ’ ಎಂದು ಪವನ್ ದೇಶಪಾಂಡೆ ತಿಳಿಸಿದ್ದಾರೆ.

ರುದ್ರ ವೀಣೆಯನ್ನು ತಯಾರಿಸಲು ಕಲಾವಿದರಿಗೆ ಐದು ತಿಂಗಳ ಸಮಯ ಹಿಡಿದಿದ್ದು, ಕೆಟ್ಟು ಕೆಲಸಕ್ಕೆ ಬಾರದ ವಾಹನಗಳ ಚೈನ್‌, ಬಾಲ್-ಬೇರಿಂಗ್‌, ತಂತಿ, ಗೇರ್‌ ಮೊದಲಾದ ವಸ್ತುಗಳನ್ನು ಬಳಸಿದ್ದಾರೆ.

ಈ ವಿಶಿಷ್ಟ ಕಲಾಕೃತಿಗೆ ತಗುಲಿರುವ ವೆಚ್ಚ 15 ರಿಂದ 20 ಲಕ್ಷ ರೂ. ಆಗಿದೆ. ವೆಚ್ಚವನ್ನು ಭೋಪಾಲ್ ಮುನ್ಸಿಪಲ್ ಕಾರ್ಪೊರೇಷನ್ ಭರಿಸಿದೆ ಎಂದು ಕಲಾವಿದರು ಹೇಳುತ್ತಾರೆ.

Join Whatsapp