ಗುಜರಾತ್: ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಯನ್ನು ಹಸುವೊಂದು ಬೆನ್ನಟ್ಟಿ ದಾಳಿ ಮಾಡುವ ದೃಶ್ಯ ವೈರಲ್ ಆಗುತ್ತಿದೆ. ಬೈಕ್‌ನ ಹಿಂದೆ ಕುಳಿತಿದ್ದ ಮಹಿಳೆಯನ್ನೇ ಗುರಿಯಾಗಿಸಿ ಹಸು ದಾಳಿ ಮಾಡಿದ ಘಟನೆ ಗುಜರಾತ್‌ನ ಮೊಡಾಸಾದ ಸಹಯೋಗ್ ಚೌಕ್ ಬಳಿ ನಡೆದಿದೆ.
ಈಗ ಹಸು, ಎಮ್ಮೆಗಳಂತಹ ಸಾಧು ಪ್ರಾಣಿಗಳು ಕೂಡ ಜನರ ಮೇಲೆ ದಾಳಿ ಮಾಡಲು ಶುರು ಮಾಡುತ್ತಿರುವುದು ವರದಿಯಾಗುತ್ತಿವೆ. ಹಸುವೊಂದು ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ಘೋರವಾಗಿ ದಾಳಿ ಮಾಡಿದೆ.
ಹಸುವೊಂದು ಪೆಟ್ರೋಲ್ ಪಂಪ್‌ನ ಬಳಿ ಬೈಕ್‌ನಲ್ಲಿದ್ದ ದಂಪತಿಯನ್ನು ಹಿಂಬಾಲಿಸಿದೆ. ಆಗ ಬೈಕ್ ಸವಾರ ಬೈಕನ್ನು ನಿಲ್ಲಿದ್ದಾರೆ. ಬೈಕ್ ಹಿಂದೆ ಕುಳಿತ ಮಹಿಳೆ ಹಸುವನ್ನು ಕಂಡು ಹೆದರಿ ಓಡಲು ಶುರು ಮಾಡಿದ್ದಾರೆ. ಹಿಂದೆ ಅಟ್ಟಿಸಿಕೊಂಡು ಬಂದ ಹಸು ಆಕೆಯನ್ನು ಗುದ್ದಿ ಕೆಳಗೆ ಕೆಡವಿ ಕೊಂಬಿನಿಂದ ತಿವಿಯಲು ಶುರುಮಾಡಿದೆ. ಆಗ ಆಕೆಯ ಪತಿ ಹಸುನಿಂದ ಆಕೆಯನ್ನು ಬಿಡಿಸಲು ಪ್ರಯತ್ನಿಸಿದರೂ ಅದು ಬಿಡದೇ ಆಕೆಯ ಮೇಲೆ ದಾಳಿ ಮುಂದುವರಿಸಿದೆ. ಆಗ ಅಲ್ಲಿದ್ದ ಜನರು ಹಸುವಿಗೆ ದೊಣ್ಣೆಯಿಂದ ಹೊಡೆದು ಓಡಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಈ ದುರಂತ ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿದೆ. ಸದ್ಯ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಈ ಹಸು ಬೈಕ್ ನ ಬೆನ್ನಟ್ಟಿ ಮಹಿಳೆಯ ಮೇಲೆ ದಾಳಿ ಮಾಡಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ದಂಪತಿ ಹಸುವಿಗೆ ಯಾವುದೇ ಪ್ರಚೋದನೆ ನೀಡಿರಲಿಲ್ಲ ಎನ್ನಲಾಗಿದೆ.
ಬೀದಿಯಲ್ಲಿ ನಡೆದಾಡುವಾಗ ನಾಯಿ ಮಾತ್ರವಲ್ಲ ಇತರ ಪ್ರಾಣಿಗಳ ಬಗ್ಗೆ ಕೂಡ ಎಚ್ಚರಿಕೆ ವಹಿಸಬೇಕಾಗಿದೆ.