ಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಸಂಘಪರಿವಾರದ ವಿವಿಧ ಸಂಘಟನೆಗಳು ಮಂಗಳೂರಿನ ಐತಿಹಾಸಿಕ ನೆಹರು ಮೈದಾನದ ಹೆಸರನ್ನು ಕೇಂದ್ರ ಮೈದಾನ ಎಂದು ಉಲ್ಲೇಖಿಸುತ್ತಿದ್ದವು. ಇದೀಗ ಕರ್ನಾಟಕ ಸಾಹಿತ್ಯ ಅಕಾಡಮಿ ಇತ್ತೀಚೆಗೆ ಹೊರ ತಂದಿರುವ ಸ್ವಾತಂತ್ರ್ಯ ಹೋರಾಟದ ಕರ್ನಾಟಕ ಕೇಂದ್ರ ಮೈದಾನ ಎಂಬ ಪುಸ್ತಕದಲ್ಲಿ ಮಂಗಳೂರಿನ ನೆಹರೂ ಮೈದಾನವನ್ನು ಕೇಂದ್ರ ಮೈದಾನ ಎಂದು ಉಲ್ಲೇಖಿಸಲಾಗಿದೆ. ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರಿಗೆ ಮಾಡಿದ ಅವಮಾನವಾಗಿದೆ. ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಹಲವಾರು ದಶಕಗಳಿಂದ ಸಂಘಪರಿವಾರ ಪಠ್ಯ ಪುಸ್ತಕದ ಮೂಲಕ, ಮಾಧ್ಯಮದ ಮೂಲಕ ನಿರಂತರವಾಗಿ ಇತಿಹಾಸವನ್ನು ತಿರುಚಿ ನೈಜ ಹೋರಾಟಗಾರರಿಗೆ ಅವಮಾನ ಮಾಡಿ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದ ಹೇಡಿಗಳನ್ನು ದೇಶ ಪ್ರೇಮಿಗಳೆಂದು ಚಿತ್ರೀಕರಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇದೀಗ ಮಂಗಳೂರಿನ ನೆಹರೂ ಮೈದಾನವನ್ನು ಕೇಂದ್ರ ಮೈದಾನ ಎಂದು ಸರಕಾರದ ಕರ್ನಾಟಕ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಉಲ್ಲೇಕಿಸಿರುವುದು ಅಕ್ಷಮ್ಯ ಅಪರಾದವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಲವಾರು ಸಭೆ ಸಮಾರಂಭಗಳಿಗೆ ಸಾಕ್ಷಿಯಾದ ಮಂಗಳೂರಿನ ಹೃದಯ ಭಾಗದಲ್ಲಿರುವ ಈ ಮೈದಾನಕ್ಕೆ 1960ರಲ್ಲಿ ನೆಹರು ಮೈದಾನ ಎಂದು ನಾಮಕರಣ ಮಾಡಲಾಗಿತ್ತು. 2016 ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಈ ಮೈದಾನದಲ್ಲಿ ನೆಹರೂರವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಸರಕಾರದ ಕಾರ್ಯಕ್ರಮ ಸೇರಿದಂತೆ ಹಲವಾರು ಸಾಮಾಜಿಕ ಸಮಾರಂಭಗಳು ನಡೆಯುತ್ತಿದ್ದ ಮೈದಾನಕ್ಕೆ ಇದೀಗ ಸರಕಾರದ ಅಧಿಕೃತ ಇಲಾಖೆಯೇ ಹೊರ ತಂದಿರುವ ಪುಸ್ತಕದಲ್ಲಿ ಕೇಂದ್ರ ಮೈದಾನ ಎಂದು ಉಲ್ಲೇಖಿಸಿರುವ ಉದ್ದೇಶ ಏನು? ಎಂಬುದನ್ನು ಕನ್ನಡ, ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತಿಹಾಸ ಅರಿಯದವರು ಇತಿಹಾಸ ನಿರ್ಮಿಸಲಾರರು ಎಂಬ ಅಂಬೇಡ್ಕರ್ ರವರ ಮಾತಿನಂತೆ ಯಾವುದೇ ಇತಿಹಾಸ ಅರಿಯದ ಇತಿಹಾಸದ ಯಾವುದೇ ಹೋರಾಟಗಳಲ್ಲಿ ಭಾಗಿಯಾಗದ ಬಿಜೆಪಿಗರು ಇಂದು ಇತಿಹಾಸವನ್ನು ತಿರುಚುವ ಮೂಲಕ ನಾಡಿನ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ. ಕರ್ನಾಟಕ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೂಡಲೇ ಕೇಂದ್ರ ಮೈದಾನದ ಬದಲು ನೆಹರು ಮೈದಾನ ಎಂದು ಹೆಸರು ಬದಲಾಯಿಸಿ ಪುಸ್ತಕದ ಹೊಸ ಮುದ್ರಣವನ್ನು ಹೊರತರಬೇಕು. ಇಲ್ಲದಿದ್ದರೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಎಸ್ ಡಿಪಿಐ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಅನ್ವರ್ ಸಾದತ್ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.