ಕೊಡವ ಜನಾಂಗದ ದೇವತೆಗೆ ಅವಹೇಳನ ಪ್ರಕರಣ; ಸೂಕ್ತ ತನಿಖೆಗೆ ಆಗ್ರಹ: SKSSF ಕೊಡಗು

Prasthutha|

ಮಡಿಕೇರಿ: ಕೊಡವರ ಕುಲದೇವತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ರವಾನೆ ಘಟನೆ ಖಂಡನೀಯ. ಇಲ್ಲಿನ ಶಾಂತಿಯುತ ವಾತಾವರಣವನ್ನು ಕೆಡಿಸಲು ದುಷ್ಟ ಶಕ್ತಿಗಳು ಕೆಲವು ವರ್ಷಗಳಿಂದ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸುತ್ತಿದೆ. ಇದಕ್ಕೆ ಪೂರಕವಾದ ಕೃತ್ಯಗಳಿಗೆ ಶಾಂತಿಯುತ ಜಿಲ್ಲೆಯಾದ ಕೊಡಗು ಸಾಕ್ಷಿಯಾಗುತ್ತಿರುವುದು ಅತ್ಯಂತ ಖೇದಕರ ಎಂದು SKSSF ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ತಿಳಿಸಿದ್ದಾರೆ.

- Advertisement -

ಯಾವುದೇ ಧರ್ಮವಿರಲಿ ಮತ್ತೊಂದು ಧರ್ಮವನ್ನು ಅಥವಾ ಜನಾಂಗವನ್ನು ನಿಂದಿಸಲು ಅಥವಾ ಅವಮಾನಿಸಲು ಪ್ರೋತ್ಸಾಹ ನೀಡುವುದಿಲ್ಲ ಬದಲಾಗಿ ಗೌರವಿಸಲು ಒತ್ತಿ ಹೇಳುತ್ತದೆ. ಕೊಡಗಿನಲ್ಲಿ ಎಲ್ಲಾ ವಿಭಾಗದ ಜನರು ಪರಸ್ಪರ ಪ್ರೀತಿಯಿಂದ, ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ ಎಂದು ಹೇಳಿದರು.

ಕೊಡವ ಜನಾಂಗಕ್ಕೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಅಮಾಯಕ ವಿದ್ಯಾರ್ಥಿಯೋರ್ವನನ್ನು ಬಲಿಪಶು ಮಾಡುತ್ತಿರುವುದು ಸೂಕ್ತವಲ್ಲ. ಅದಲ್ಲದೇ ವಿದ್ಯಾರ್ಥಿಯ ಭಾವಚಿತ್ರವನ್ನು ಸಹ ದುರ್ಬಳಕೆ ಮಾಡಲಾಗಿದೆ. ಘಟನೆಗೂ ಆ ವಿದ್ಯಾರ್ಥಿಗೂ ಯಾವುದೇ ಸಂಬಂಧವಿಲ್ಲವೆಂದು ಸಾಬೀತಾಗಿದ್ದರೂ ಸಹ ವಿದ್ಯಾರ್ಥಿಯ ಅಕೌಂಟ್ ಹ್ಯಾಕ್ ಮಾಡಲಾಗಿದೆ ಎಂದು ಮತ್ತೆ ಸುಳ್ಳುಗಳನ್ನು ಹಬ್ಬಿಸುವ ಮೂಲಕ ವಿದ್ಯಾರ್ಥಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ತನಿಖಾಧಿಕಾರಿಗಳು ಘಟನೆಯ ಹಿಂದಿರುವ ನೈಜ ಆರೋಪಿಗಳನ್ನು ಪತ್ತೆ ಹಚ್ಚಬೇಕಾಗಿದೆ ಎಮದು ಒತ್ತಾಯಿಸಿದರು.

- Advertisement -

ತಿಂಗಳುಗಳ ಹಿಂದೆ ಜಿಲ್ಲೆಯಲ್ಲಿ ಪಾಕಿಸ್ತಾನ ಝಿಂದಾಬಾದ್ ಎಂಬ ವಿಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಒಂದು ಸಮುದಾಯದ ಮೇಲೆ ಆರೋಪ ನಡೆಸಿ ಕೊನೆಗೆ ಬಿಜೆಪಿ ಬೆಂಬಲಿತ ಕಾರ್ಯಕರ್ತರು ಸಿಕ್ಕಿ ಬಿದ್ದ ಘಟನೆ ನಡೆದಿದೆ. ಈ ರೀತಿ ಕಿಡಿಗೇಡಿಗಳು ಹಲವು ಕೃತ್ಯಗಳನ್ನು ನಡೆಸಿರುವ ಉದಾಹರಣೆಗಳು ರಾಜ್ಯದಲ್ಲಿ ಹಾಗೂ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಘಟನೆಗಳು ಕಾಣ ಸಿಗುತ್ತಿದೆ. ಆದ್ದರಿಂದ ಶೀಘ್ರದಲ್ಲೇ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ತಕ್ಕ ಶಿಕ್ಷೆಗೆ ಒಳಪಡಿಸುವ ಮೂಲಕ ಗೊಂದಲವನ್ನು ನಿವಾರಣೆ ಮಾಡಬೇಕೆಂದು SKSSF ಕೊಡಗು ಜಿಲ್ಲಾ ಸಮಿತಿಯು ಆಗ್ರಹಿಸಿದೆ.

Join Whatsapp