ನದಿಗೆ ಬಿದ್ದು ಕೊಚ್ಚಿಕೊಂಡು ಹೋದ ಕಾರು: ಮರಗಳ ಕೊಂಬೆ ಹಿಡಿದು ಜೀವ ಉಳಿಸಿಕೊಂಡ ಇಬ್ಬರ ರಕ್ಷಣೆ

Prasthutha|

ಕಾಸರಗೋಡು: ಕರ್ನಾಟಕದ ಮತ್ತು ಕೇರಳದ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಅನಾಹುತಗಳೂ ವರದಿಯಾಗುತ್ತಿದೆ. ಮಳೆಗೆ ಚಾಲಕನ ನಿಯಂತ್ರ ತಪ್ಪಿದ ಕಾರೊಂದು ಸೇತುವೆಯಿಂದ ನದಿಗೆ ಬಿದ್ದು, ನೀರಲ್ಲಿ ಕೊಚ್ಚಿಕೊಂಡು ಹೋದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

- Advertisement -

ಕಾಸರಗೋಡು ಪಟ್ಟಣದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕುಟ್ಟಿಕೋಲ್ ಬಳಿಯ ಪಲ್ಲಂಚಿಯಲ್ಲಿ ಮುಂಜಾನೆ ಈ ಘಟನೆ ನಡೆದಿದೆ.

ತಡೆಗೋಡೆ ಇಲ್ಲದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಯಿಂದ ನದಿಗೆ ಹಾರಿದೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಕಾರಿನಲ್ಲಿದ್ದ ಇಬ್ಬರೂ ಮರಗಳ ಕೊಂಬೆಗಳನ್ನು ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾರೆ.

- Advertisement -

ಕಾಞಂಗಾಡ್ ಮೂಲದ ಅಬ್ದುಲ್ ರಶೀದ್ ಹಾಗೂ ತಸ್ರೀಫ್ ಪ್ರಾಣ ಉಳಿಸಿಕೊಂಡವರು. ಕಾರು ನದಿಯಲ್ಲಿ ಸಂಪೂರ್ಣ ಮುಳುಗಿದ್ದರೂ ಅದೃಷ್ಟವಶಾತ್ ಇಬ್ಬರೂ ಬದುಕಿ ಬಂದಿದ್ದು, ಸ್ಥಳದಲ್ಲಿ ಸೇರಿದ ಜನರು, ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.

ಅಬ್ದುಲ್ ರಶೀದ್ ಮತ್ತು ತಸ್ರೀಫ್ ಕೆಲಸದ ನಿಮಿತ್ತ ದಕ್ಷಿಣ ಕನ್ನಡದ ಉಪ್ಪಿನಂಗಡಿಗೆ ತೆರಳುತ್ತಿದ್ದರು. ನದಿಗೆ ಅಡ್ಡಲಾಗಿ ಬ್ರಿಡ್ಜ್​ ಒಂದನ್ನು ಕಟ್ಟಲಾಗಿದ್ದು, ಕಾರು ರಸ್ತೆ ಬಿಟ್ಟು ನದಿಗೆ ಬಿದ್ದಿದೆ.

ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡ ಇಬ್ಬರನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp