ದೇಶವನ್ನು ವಿನಾಶ ಮಾಡುವ ಬಜೆಟ್: ಸಿದ್ದರಾಮಯ್ಯ ಕಿಡಿ

Prasthutha|

ಮೈಸೂರು: ಇಂದು ಮಂಡನೆಯಾಗಿರುವ ಕೇಂದ್ರ ಬಜೆಟ್ ಯಾವುದಕ್ಕೂ ಆದ್ಯತೆ ನೀಡಿಲ್ಲ. ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ. ಇದೊಂದು ಸಬ್ ಕಾ ವಿನಾಶ್ ಬಜೆಟ್ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಬಜೆಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಮಂಡನೆಯಾದ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಆದ್ದರಿಂದ ನಿರಾಶೆಯಾಗಿಲ್ಲ.‌ ಆದರೆ ಮಹಿಳೆಯರು, ರೈತರು ಹಾಗೂ ಮಧ್ಯಮ ವರ್ಗದವರು ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ನಿರೀಕ್ಷೆ ಹುಸಿಯಾಗಿದೆ ಎಂದರು.

ವಿಶೇಷವಾಗಿ ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರದ ಉತ್ತೇಜನಕ್ಕಾಗಿ ಕಾರ್ಯಕ್ರಮಗಳ ಘೋಷಣೆ ಆಗುತ್ತವೆಂಬ ನಿರೀಕ್ಷೆ ಇತ್ತು. ಕಳೆದ ವರ್ಷ 34 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದರು, ಈ ಬಾರಿ 39 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದಾರೆ. ಮುಂಬರುವ ವರ್ಷಕ್ಕೆ ಕೇಂದ್ರ ಸರ್ಕಾರ 11 ಲಕ್ಷದ 87 ಸಾವಿರ ಕೋಟಿ ಸಾಲ ಮಾಡುತ್ತಿದೆ. ಕಳೆದ ವರ್ಷ ದೇಶದ ಮೇಲೆ 135 ಲಕ್ಷ ಕೋಟಿ ಸಾಲ ಇತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಮನಮೋಹನ್ ಸಿಂಗ್ ಅವರ ಸರ್ಕಾರ ನಿರ್ಗಮಿಸುವವರೆಗೆ ಇದ್ದ ಒಟ್ಟು ಸಾಲ 53 ಲಕ್ಷ ಕೋಟಿ ರೂಪಾಯಿ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೇವಲ ಎಂಟೇ ವರ್ಷದಲ್ಲಿ 93 ಲಕ್ಷ ಕೋಟಿ ಸಾಲ ಮಾಡಿದೆ. ಹೀಗಾಗಿ ಪ್ರತೀ ವರ್ಷ 9 ಲಕ್ಷದ 40 ಸಾವಿರ ಕೋಟಿ ಬಡ್ಡಿ ಪಾವತಿಸಬೇಕಾಗುತ್ತದೆ. ಇದರಿಂದ ಬಜೆಟ್ ನ ಬಹುಭಾಗ ಸಾಲ ಮತ್ತು ಬಡ್ಡಿಗೆ ಖರ್ಚಾಗುತ್ತದೆ ಎಂದು ಹೇಳಿದರು.

- Advertisement -

ಕೊರೊನಾ ಸಂದರ್ಭದಲ್ಲಿ ಜನರಿಗೆ ಉದ್ಯೋಗ ನೀಡಿ ಹಸಿವಿನಿಂದ ಕಾಪಾಡಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಹಿಂದಿನ ಬಜೆಟ್ ನಲ್ಲಿ 37 ಸಾವಿರ ಕೋಟಿ ಕಡಿತ ಮಾಡಿದ್ದರು, ಈ ಬಾರಿ ಮತ್ತೆ ಕಳೆದ ಬಾರಿಗಿಂತ 25 ಸಾವಿರ ಕೋಟಿ ಅನುದಾನ ಕಡಿತ ಮಾಡಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಕಳೆದ ಬಾರಿಯ ಬಜಟ್ ಗಿಂತ 80 ಕೋಟಿ ಮಾತ್ರ ಹೆಚ್ಚು ಅನುದಾನ ನೀಡಿದ್ದಾರೆ. ದೇಶದಲ್ಲಿ ಕೊರೊನಾ ಇದೆ, ಯಾವಾಗ ಕಡಿಮೆಯಾಗುತ್ತೋ ಗೊತ್ತಿಲ್ಲ, ಹೀಗಿರುವಾಗ ಈ ಇಲಾಖೆಗೆ ಹೆಚ್ಚು ಅನುದಾನ ನೀಡಬೇಕಿತ್ತು ಎಂದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಆಹಾರ ಭದ್ರತೆ ಕಾಯ್ದೆಯಡಿ ನೀಡುತ್ತಿದ್ದ ಅನುದಾನ ಕಳೆದ ಬಾರಿಗಿಂತ 79,638 ಕೋಟಿ ಕಡಿಮೆಯಾಗಿದೆ. ಇದರಿಂದ ಕಾಯ್ದೆ ದುರ್ಬಲವಾಗಲಿದೆ. ಅಕ್ಕಿ, ಗೋಧಿ ಮುಂತಾದ ಅಗತ್ಯ ವಸ್ತುಗಳ ಹಂಚಿಕೆ ಮೇಲೆ ಇದು ಪರಿಣಾಮ ಬೀರುತ್ತದೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ 4,700 ಕೋಟಿ ಹೆಚ್ಚಿಸಿದ್ದಾರೆ, ಆದರೆ ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಿದ್ದಾರೆ. ಮುಂದಿನ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ ಇಳಿಮುಖವಾಗಲಿದೆ ಎಂದು ಬಜೆಟ್ ನಲ್ಲಿ ಅಂದಾಜು ಮಾಡಿದ್ದಾರೆ. ಈ ವರ್ಷ ನಮ್ಮ‌ಜಿ.ಡಿ.ಪಿ ಬೆಳವಣಿಗೆ ದರ 9.2 ಇದೆ, ಇದು 8% ಗೆ ಬರಲಿದೆ ಎಂದು ಅಂದಾಜಿಸಿದ್ದಾರೆ. ಮನಮೋಹನ್ ಸಿಂಗ್ ಅವರ ಸರ್ಕಾರ ಇದ್ದಾಗ ಜಿಡಿಪಿಗೆ ಹೋಲಿಸಿದರೆ ದೇಶದ ಸಾಲ 46% ಇತ್ತು, ಈಗದು 61 – 62 % ಗೆ ಏರಿಕೆಯಾಗಿದೆ.ರೈತರ ಗೊಬ್ಬರಕ್ಕೆ ಈ ವರ್ಷ ಸಬ್ಸಿಡಿ ಹಣ ಕಡಿಮೆ ಮಾಡಿದ್ದಾರೆ, 1.40 ಲಕ್ಷ ಕೋಟಿ ಇತ್ತು, ಈಗ ಅದನ್ನು 1.05 ಲಕ್ಷ ಕೋಟಿಗೆ ಇಳಿಸಿದ್ದಾರೆ. ಇದರಿಂದ ಗೊಬ್ಬರದ ಬೆಲೆ ಹೆಚ್ಚಾಗಲಿದೆ ಎಂದು ತಿಳಿಸಿದರು.

ವಾಜಪೇಯಿ ಅವರ ಸರ್ಕಾರವೂ ನದಿ ಜೋಡಣೆ ಮಾಡುತ್ತೇವೆ ಎಂದು ಹೇಳಿತ್ತು, ಮತ್ತೇ ಈ ಸರ್ಕಾರವು ಅದೇ ಮಾತನ್ನು ಹೇಳಿದೆ. ವಾಜಪೇಯಿ ಸರ್ಕಾರ ಹೋಗಿ ಎರಡು ದಶಕ ಕಳೆದರೂ ಆಗಿಲ್ಲ.ಮಹದಾಯಿ ಯೋಜನೆಗೆ ನೋಟಿಫಿಕೇಷನ್ ಆಗಿದೆ, ಕೆಲಸ ಆರಂಭಿಸಲು ಬಿಜೆಪಿಯವರಿಗೆ ಇನ್ನೂ ಆಗಿಲ್ಲ. ಮೇಕೆದಾಟು ಯೋಜನೆಗೆ ಅರಣ್ಯ ಅನುಮತಿ ಬೇಕಿದೆ, ಅದನ್ನು ಕೂಡ ಕೊಟ್ಟಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆಗೆ ನ್ಯಾಯಾಧೀಕರಣದ ಆದೇಶ ಆಗಿ ಸಾಕಷ್ಟು ಸಮಯ ಆಗಿದೆ, ಅದಕ್ಕೆ ನೋಟಿಫಿಕೇಷನ್ ಮಾಡಿಲ್ಲ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಮಾಡಿ ಎಂದು ಮನವಿ ಮಾಡಿದ್ದೆವು, ಅದಕ್ಕೆ ಈ ವರೆಗೆ ಅನುಮೋದನೆ ಕೊಟ್ಟಿಲ್ಲ.

ಬಜೆಟ್ ಎಂದರೆ ಸರ್ಕಾರದ ಆದ್ಯತೆಗಳೇನು, ಇಂದಿನ ಸಮಸ್ಯೆಗಳೇನು, ಅದಕ್ಕೆ ಯಾವ ರೀತಿ ಪರಿಹಾರ ರೂಪಿಸಬೇಕು ಎಂಬ ಅಂಶ ಇರಬೇಕಿತ್ತು. ಹಸಿವು, ಬಡತನ, ನಿರುದ್ಯೋಗ ಸಮಸ್ಯೆಗಳ ಪರಿಹಾರದ ಬಗ್ಗೆ ಯಾವುದೇ ಕ್ರಮಗಳ ಮುನ್ಸೂಚನೆ ಇಲ್ಲ. ಮುಂದಿನ 25 ವರ್ಷದಲ್ಲಿ ಏನೆಲ್ಲಾ ಮಾಡ್ತೀವಿ ಎಂದು ಹೇಳಿದ್ದಾರೆ, 25 ವರ್ಷವೂ ಇವರದೇ ಸರ್ಕಾರ ಇರುತ್ತಾ?

ಸಣ್ಣ ಕೈಗಾರಿಕಾ, ಅತಿ ಸಣ್ಣ ಕೈಗಾರಿಕೆ, ಮಧ್ಯಮ ಕೈಗಾರಿಕೆಗಳು ಬಂದ್ ಅಸಗುತ್ತಿವೆ, ಶೇ. 60 ರಷ್ಟು ಉದ್ಯೋಗ ನಷ್ಟವಾಗಿದೆ. ಇದನ್ನು ಪುನಶ್ಚೇತನಗೊಳಿಸಲು ಈ ಬಜೆಟ್ ನಲ್ಲಿ ಯಾವ ಅಂಶಗಳು ಇಲ್ಲ. ಒಟ್ಟಾರೆ ಜನರ ನಿರೀಕ್ಷೆಗಳಿಗೆ ಸ್ಪಂದಿಸುವ, ಅಭಿವೃದ್ಧಿ ಪರವಾದ, ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಜೆಟ್ ಇದಲ್ಲ. ಇದು ದೇಶವನ್ನು ವಿನಾಶ ಮಾಡುವ ‘ಸಬ್ ಕ ವಿನಾಶ್’ ಬಜೆಟ್. ಜನರ ನಂಬಿಕೆಗೆ ಸರ್ಕಾರ ದ್ರೋಹ ಮಾಡಿದೆ.

ರಾಜ್ಯದ ಸಬ್ ಅರ್ಬನ್ ರೈಲು ಯೋಜನೆಗೆ ಅನುದಾನ ನೀಡಿಲ್ಲ. ನಾಡಿನ ಜನ ನಿರೀಕ್ಷೆಗಳು ಹುಸಿಯಾಗಿದೆ. ಇದು ಅಭಿವೃದ್ಧಿಗೆ ಮಾರಕವಾದ ಬಜೆಟ್ ಆಗಿದೆ.

ಈ ವರ್ಷದ ಮಾರ್ಚ್ ತಿಂಗಳಿಗೆ ಕೇಂದ್ರದಿಂದ ಬರುವ ಜಿ.ಎಸ್.ಟಿ ಪರಿಹಾರ ಅಂತ್ಯವಾಗಲಿದೆ. ಇದನ್ನು ಮತ್ತೆ ಐದು ವರ್ಷ ಮುಂದುವರೆಸಬೇಕು ಎಂದು ನಾವು ಒತ್ತಾಯ ಮಾಡಿದ್ದೆವು. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಲ್ಲ. ಒಂದು ವೇಳೆ ಜಿ.ಎಸ್.ಟಿ ಪರಿಹಾರ ಬರದೇ ಹೋದರೆ ರಾಜ್ಯದ ಹಣಕಾಸಿನ ಸ್ಥಿತಿ ಇನ್ನಷ್ಟು ಕೆಟ್ಟು ಹೋಗುತ್ತೆ.

ಈ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆ ಕಡಿತ ಮಾಡುತ್ತಿರುವುದರಿಂದ ಜನ ಸಾಮಾನ್ಯರ ಮೇಲೆ ಹೆಚ್ಚು ತೆರಿಗೆ ಮತ್ತು ಸರ್ಕಾರದ ಸಾಲ ಹೆಚ್ಚಾಗುತ್ತಿದೆ. ಇದು ಕಾರ್ಪೊರೇಟ್ ಸ್ನೇಹಿ ಸರ್ಕಾರ.

ರಾಜ್ಯಕ್ಕೆ ಅನುದಾನ ತರುವಲ್ಲಿ‌ ಬಸವರಾಜ ಬೊಮ್ಮಾಯಿ ಸರ್ಕಾರ ವಿಫಲವಾಗಿದೆ. ಪ್ರಧಾನಿಯವರ ಮುಂದೆ ಧ್ವನಿ ಎತ್ತಿ ಮಾತನಾಡದ ಹೇಡಿ ಸರ್ಕಾರ ಇದು. ರಾಜ್ಯದ ಸಂಸದರೂ ಸಹ ಪ್ರಧಾನಿಯವರ ಮುಂದೆ ಮಾತೇ ಆಡುವುದಿಲ್ಲ ಎಂದು ಹೇಳಿದರು.

Join Whatsapp