ಅಸ್ವಸ್ಥ ಮಕ್ಕಳಿಗೆ ಚಿಕಿತ್ಸೆ ಮುಂದುವರಿಕೆ
ದಾವಣಗೆರೆ: ಉಪವಾಸ ಮುಗಿಸಿ ಪಾನಿಪೂರಿ ತಿಂದು ಅಸ್ವಸ್ಥಗೊಂಡಿದ್ದ ಮಕ್ಕಳಲ್ಲಿ ಓರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
6 ವರ್ಷದ ಹಝರತ್ ಬಿಲಾಲ್ ಬಿನ್ ಇರ್ಫಾನ್ ಮೃತ ಬಾಲಕ.
ಮಾರ್ಚ್ 15ರಂದು ರಮಝಾನ್ ಉಪವಾಸವಿದ್ದ ಮಕ್ಕಳು, ಉಪವಾಸ ಮುಗಿಯುತ್ತಿದ್ದಂತೆ ಪಾನಿಪೂರಿ ತಿಂದಿದ್ದರು. ಇದರಿಂದಾಗಿ ಸುಮಾರು 19 ತೀವ್ರ ಮಕ್ಕಳು ಅಸ್ವಸ್ಥಗೊಂಡಿದ್ದರು. ಎಲ್ಲರನ್ನೂ ಆಸ್ಪತ್ರೆ ಸೇರಿಸಲಾಗಿತ್ತು. ಈ ಪೈಕಿ ಓರ್ವ ಬಾಲಕ ಮೃತಪಟ್ಟಿದ್ದಾನೆ. ಇನ್ನು ಮೂವರು ಚೇತರಿಸಿಕೊಂಡಿದ್ದು, ಉಳಿದ ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ.
ಘಟನೆಯಲ್ಲಿ ಒಟ್ಟು ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿತ್ತು. ವಾಂತಿ ಬೇಧಿ, ಹೊಟ್ಟೆನೋವಿನಿಂದ ಮಕ್ಕಳು ಅಸ್ಪಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಇದೀಗ ಮಕ್ಕಳೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಘಟನೆ ನಡೆಯುತ್ತಿದ್ದಂತೆ ಪಾನಿಪೂರಿ ಅಂಗಡಿ ಮಾಲೀಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮಲೆಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಸಿಇಒ ಸುರೇಶ್ ಹಿಟ್ನಾಳ್ ಅವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಪಾನಿಪೂರಿ ಮಾದರಿ ಸಂಗ್ರಹಕ್ಕೆ ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ.