ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ 21ವರ್ಷದ ಯುವಕ ಕುಸಿದು ಬಿದ್ದು ಮೃತ್ಯು

Prasthutha|

ಉತ್ತರ ಪ್ರದೇಶ: ಯುವಕನೊಬ್ಬ ಜಿಮ್‌ನ ಟ್ರೆಡ್‌ಮಿಲ್‌ನಲ್ಲಿ ವಾಕಿಂಗ್​​​ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಈ ಸಿಸಿಟಿವಿ ದೃಶ್ಯಾವಳಿಗಳು ನೆಟ್ಟಿಗರಲ್ಲಿ ನಡುಕ ಉಂಟಾಗಿಸಿದೆ. ಸರಸ್ವತಿ ವಿಹಾರದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಮೃತ ಯುವಕ ಸಿದ್ಧಾರ್ಥ್ ಕುಮಾರ್ ಸಿಂಗ್(21) ಎಂದು ತಿಳಿದುಬಂದಿದೆ. ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ವರದಿಯಾಗುತ್ತಿದೆ. ಇತ್ತೀಚೆಗಷ್ಟೇ ಪ್ರಾಪರ್ಟಿ ಡೀಲರ್ ಕಚೇರಿಯಲ್ಲಿ ಕಾಯುತ್ತಿರುವಾಗ ಒಬ್ಬರು ಸಾವನ್ನಪ್ಪಿದ ಹಾಗೂ ಇನ್ನೊಬ್ಬರು ಮದುವೆಯಲ್ಲಿ ನೃತ್ಯ ಮಾಡುವಾಗ ಕುಸಿದುಬಿದ್ದು ಮೃತಪಟ್ಟಿದ್ದರು.

- Advertisement -

ಸಿದ್ಧಾರ್ಥ್ ಕುಮಾರ್ ಜಿಮ್‌ನಲ್ಲಿ ಕುಸಿದುಬಿದ್ದ ಕೂಡಲೇ ಇಬ್ಬರು ಆತನ ಸಹಾಯಕ್ಕೆ ಧಾವಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆದರೆ ದುರದೃಷ್ಟವಶಾತ್,ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಸಿದ್ಧಾರ್ಥ್ ನೋಯ್ಡಾದ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ತಮ್ಮ ತಂದೆಯೊಂದಿಗೆ ನೋಯ್ಡಾದಲ್ಲಿ ವಾಸಿಸುತ್ತಿದ್ದರು. ಯುವಕನ ತಾಯಿ ಬಿಹಾರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ದುರಂತ ಘಟನೆಗೆ 10 ನಿಮಿಷಗಳ ಮೊದಲು ಸಿಂಗ್ ತನ್ನ ತಾಯಿಯೊಂದಿಗೆ ಮಾತನಾಡಿದ್ದರು ಎಂದು ತಿಳಿದುಬಂದಿದೆ. ಮೃತದೇಹವನ್ನು ಬಿಹಾರದ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದೆ ಎಂದು ವರದಿಯಾಗಿದೆ.