ಮೈಸೂರು: PFI ಜಿಲ್ಲಾ ಮಾಜಿ ಅಧ್ಯಕ್ಷ ಕಲೀಮುಲ್ಲಾ ಅವರ ಮನೆ ಮೇಲೆ NIA ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳ ಸಹಿತ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಲೀಮುಲ್ಲಾ ಅವರ ಪತ್ನಿ ನಾವು ಭಯಪಡಲಾರೆವು ಎಂದು ಹೇಳಿದ್ದಾರೆ. ಬೆಳಗಿನ ಜಾವ 3.30 ರ ಹೊತ್ತಿಗೆ ನಮ್ಮ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮೊಬೈಲ್, ಲ್ಯಾಪ್ ಟಾಪ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಲೀಮುಲ್ಲಾ ಅವರು ಓರ್ವ ಸಾಮಾಜಿಕ ಕಾರ್ಯಕರ್ತರಾಗಿದ್ದು, ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇಂದು ದೇಶ ಒಡೆಯುವ ಕೆಲಸ ಮಾಡುತ್ತಿರುವ BJP ಮತ್ತು ಸಂಘಪರಿವಾರಕ್ಕೆ PFI, SDPI ಸಿಂಹಸ್ವಪ್ನವಾಗಿದೆ. ಮುಸ್ಲಿಮರ ಮತ್ತು ದಲಿತರ ಪರ ಧ್ವನಿ ಎತ್ತುತ್ತಿರುವ ಈ ಸಂಘಟನೆಗಳ ಧ್ವನಿ ಅಡಗಿಸುವುದೇ ಇವರ ಮೂಲ ಧ್ಯೇಯವಾಗಿದೆ. ಕೊರೋನಾದಂತಹ ಸಾಂಕ್ರಾಮಿಕ ರೋಗ ವ್ಯಾಪಕಗೊಂಡಂತಹ ಸನ್ನಿವೇಶದಲ್ಲಿ ಸ್ವಂತ ಮನೆಯವರು ಮಟ್ಟಲು ಅಸಹ್ಯ ಪಡುತ್ತಿದ್ದ ಹಲವು ಮೃತದೇಹಗಳ ಅಂತ್ಯ ಕ್ರಿಯೆಯನ್ನು PFI, SDPI ಕಾರ್ಯಕರ್ತರು ನಡೆಸಿದ್ದಾರೆ ಎಂದು ಅವರು ಹೇಳಿದರು.
PFI, SDPI ಇರುವ ವರೆಗೆ ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ ಎಂದು ಸ್ವತಃ ಸಂಘ ಪರಿವಾರವೇ ಒಪ್ಪಿಕೊಂಡಿದೆ. ಈ ನಿಟ್ಟಿನಲ್ಲಿ ತಮ್ಮ ಉಳಿವಿಗಾಗಿ ಇಂತಹ ಭಯೋತ್ಪಾದನಾ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಅಂಬೇಡ್ಕರ್ ಅವರ ಸಂವಿಧಾನವನ್ನು ಅರಿತಿರುವ ಟಿಪ್ಪುವಿನ ಪುತ್ರರು. ಯಾವುದೇ ತಪ್ಪು ಮಾಡದ ಕಾರಣ ನಮಗೆ ಯಾರ ಭಯವೂ ಇಲ್ಲ. ಧೈರ್ಯ ಇದೆ ಎಂದು ಹೇಳಿದರು.
ರಾಜ್ಯಾದ್ಯಂತ ಇಂದು PFI, SDPI ಮುಖ್ಯಸ್ಥರ ಮನೆ ಹಾಗೂ ಕಚೇರಿಗಳ ಮೇಲೆ NIA ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಹಲವು ಕಾರ್ಯಕರ್ತರು ಬಂಧನಕ್ಕೊಳಗಾಗಿದ್ದಾರೆ.