ನವದೆಹಲಿ: ರಾಷ್ಟ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಇತರ ರಾಜ್ಯಗಳ ಪಿಎಫ್ ಐ, ಎಸ್ ಡಿಪಿಐ, ಮುಖಂಡರ ಮನೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
100 ಕ್ಕೂ ಹೆಚ್ಚು ಪಿಎಫ್ ಐ ಸದಸ್ಯರು ಮತ್ತು ಅವರ ಸಂಪರ್ಕದಲ್ಲಿರುವವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ದಾಳಿಗೆ ಸಂಬಂಧಿಸಿದಂತೆ ನಡೆದ ಕಾರ್ಯಾಚರಣೆಯಲ್ಲಿ ಆಯಾ ರಾಜ್ಯದ ಪೊಲೀಸರು ಪಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಪಿಎಫ್ ಐ ಕಚೇರಿ ಮಾತ್ರವಲ್ಲದೆ, ಮುಖಂಡರ ಮನೆಗಳ ಮೇಲೂ ಎನ್ ಐಎ ಮತ್ತು ಇಡಿ ದಾಳಿ ನಡೆಸಿದ ಅಧಿಕಾರಿಗಳು, ವಿಚಾರಣೆ ನಡೆಸಿದ್ದಾರೆ. 10 ರಾಜ್ಯಗಳ 80 ಸ್ಥಳಗಳ ಮೇಲೆ 300ಕ್ಕೂ ಹೆಚ್ಚು ಎನ್ ಐಎ ಮತ್ತು ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ 100ಕ್ಕೂ ಹೆಚ್ಚು ಪಿಎಫ್ ಐ ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಪಿಎಫ್ ಐ ಮತ್ತು ಎಸ್ ಡಿಪಿಐ ಕಚೇರಿ ಮೇಲೆ ಮುಂಜಾನೆ 3.30ರ ವೇಳೆ ಎನ್ ಐಎ ದಾಳಿ ಮಾಡಿದೆ. ದಾಳಿಗೂ ಮುನ್ನ ಸ್ಥಳದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ, ನಂತರ ಎನ್ ಐಎ ದಾಳಿ ಮಾಡಿದೆ.
ಮಂಗಳೂರಿನಲ್ಲಿ ಸದ್ಯಕ್ಕೆ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಮೂವರನ್ನು ವಶಕ್ಕೆ ಪಡೆದ ಬಗ್ಗೆ ಮಾಹಿತಿ ದೊರೆತಿದೆ.
ಕೇರಳದಲ್ಲಿ ಕಾರ್ಯಾಚರಣೆ:
ಕೇರಳದ ಪಿಎಫ್ ಐನ ವಿವಿಧ ಕಚೇರಿಗಳ ಮೇಲೆ ಎನ್ ಐಎ ಮತ್ತು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಮಟ್ಟದ ನಾಯಕರ ಮನೆಗಳ ಮೇಲೆಯೂ ದಾಳಿ ನಡೆಯುತ್ತಿದೆ.