ಪೇಸಿಎಂ ವ್ಯಂಗ್ಯಚಿತ್ರಕ್ಕೆ ಬೊಮ್ಮಾಯಿ ದೂರು ನೀಡೋದಾದರೆ ನೀಡಲಿ: ಡಿಕೆಶಿ

Prasthutha|

ಬೆಂಗಳೂರು: ಯುವ ಕಾಂಗ್ರೆಸ್ ಪ್ರಾರಂಭಿಸಿದ ಪೇಸಿಎಂ‌ ಅಭಿಯಾನ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳುತ್ತೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರು ದೂರು ನೀಡಲಿ. ಅವರ ಬಗ್ಗೆ ವ್ಯಂಗ್ಯಚಿತ್ರಗಳು ಬಂದಾಗ ಯಾಕೆ ದೂರು ನೀಡಲಿಲ್ಲ? ಇದರಲ್ಲಿ ತಪ್ಪೇನು? ಸಾರ್ವಜನಿಕ ಜೀವನದಲ್ಲಿ ಇರುವಾಗ ಇದನ್ನು ಸ್ವೀಕರಿಸಬೇಕು ಎಂದು ಹೇಳಿದ್ದಾರೆ.

- Advertisement -

ಈ ಸಂದರ್ಭದಲ್ಲಿ ರಾಹುಲ್ ಗಾಂಧೀಯ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಆಗಮಿಸುವ ಕುರಿತು ಮಾಹಿತಿ ಹಂಚಿಕೊಂಡ ಡಿಕೆಶಿ, ಭಾರತ ಐಕ್ಯತಾ ಯಾತ್ರೆಯಲ್ಲಿ ಪಾದಯಾತ್ರಿಗಳನ್ನು ನಿಗದಿತ ದಿನ ಕರೆ ತರಲು ನಮ್ಮ ನಾಯಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ನಾಡಿದ್ದು ಬೆಳಗ್ಗೆ ಯಾತ್ರೆಯ ಎಲ್ಲಾ ಸಮಿತಿ ಅಧ್ಯಕ್ಷರನ್ನು ರಾಷ್ಟ್ರೀಯ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಭೇಟಿ ಮಾಡಿ ಸಭೆ ನಡೆಸಲಿದ್ದಾರೆ. ಯಾತ್ರೆಯ ತಯಾರಿ ಕುರಿತು ಈ ಸಭೆಯಲ್ಲಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಸುರ್ಜೇವಾಲ ಅವರು ಗುಂಡ್ಲುಪೇಟೆಯಿಂದ ರಾಯಚೂರಿನವರೆಗೆ ಯಾತ್ರೆಯ ಮಾರ್ಗದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ತಯಾರಿ ಕುರಿತು ಪರಿಶೀಲನೆ ಮಾಡಲಿದ್ದಾರೆ ಎಂದು ತಿಳಿಸಿದರು.

- Advertisement -

ಮುಖ್ಯಮಂತ್ರಿಗಳ ವಿರುದ್ಧ ಕಾಂಗ್ರೆಸ್ ಅಭಿಯಾನದ ಕುರಿತು ಮಾಧ್ಯಮಗಳ ಪ್ರಶ್ನೆಗೆ, ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರನ್ನು ನಿದ್ರಾಮಯ್ಯ ಎಂದು ಲೇವಡಿ ಮಾಡುತ್ತಿದ್ದರು. ನನ್ನನ್ನು ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂದು ಕರೆಯುತ್ತಾರೆ. ರಾಜಕಾರಣದಲ್ಲಿ ಅಧಿಕಾರದಲ್ಲಿರುವವರು ಇವೆಲ್ಲವನ್ನೂ ಅರಗಿಸಿಕೊಳ್ಳಬೇಕು ಎಂದು ಹೇಳಿದರು.

ಬೊಮ್ಮಾಯಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂದು ನಾವು ಆರೋಪ ಮಾಡಿದ್ದೇವಾ? ಅಧಿಕಾರದಲ್ಲಿರುವವರು ಹಾಗೂ ಜವಾಬ್ದಾರಿ ಹೊತ್ತಿರುವವರ ಕಡೆ ಬೆಟ್ಟು ಮಾಡುವುದು ಸಹಜ. ವ್ಯಂಗಚಿತ್ರಗಳಲ್ಲಿ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳನ್ನು ಕ್ರಿಯಾತ್ಮಕ ರೀತಿಯಲ್ಲಿ ಲೇವಡಿ ಮಾಡುತ್ತಾರೆ. ಭ್ರಷ್ಟಾಚಾರ ವಿಚಾರವಾಗಿ ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ವಿವಿಧ ರೀತಿಯಲ್ಲಿ ಪ್ರಶ್ನಿಸಲಾಗಿದೆ. ವಿವಿಧ ರೀತಿಯಲ್ಲಿ ಜನರಿಗೂ ಈ ವಿಚಾರ ಮುಟ್ಟಿಸಬೇಕಾಗುತ್ತದೆ. ಹೀಗಾಗಿ ಈ ರೀತಿ ಮಾಡಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದು ಆರೋಗ್ಯಕರ ರಾಜಕೀಯ ಎಂದು ತಿಳಿಸಿದರು.



Join Whatsapp