ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ ಆಗ ವಿರೋಧ ಪಕ್ಷದಲ್ಲಿದ್ದ ನೀವು ಏನು ಮಾಡುತ್ತಿದ್ದಿರಿ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಭ್ರಷ್ಟಾಚಾರ ಇಂದು ವ್ಯಾಪಕವಾಗಿ ನಡೆಯುತ್ತಿದೆ. ಈ ವಿಚಾರವನ್ನು ನಾವು ಪ್ರಸ್ತಾಪಿಸಿದರೆ ನಿಮ್ಮ ಕಾಲದಲ್ಲೂ ಭ್ರಷ್ಟಾಚಾರ ಇರಲಿಲ್ವಾ ಎಂದು ಬೇಜವಾಬ್ದಾರಿತನದ ಉತ್ತರ ನೀಡುತ್ತಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ ಆಗ ವಿರೋಧ ಪಕ್ಷದಲ್ಲಿದ್ದ ನೀವು ಏನು ಮಾಡುತ್ತಿದ್ದಿರಿ? ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ವಿಧಾನಸೌಧದ ಮುಂಭಾಗದಲ್ಲಿ ಮಾದ್ಯಮಗಳಿಗೆ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು, ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಬಹಳಷ್ಟು ಜನ ಉದ್ಯೋಗಾಕಾಂಕ್ಷಿ ಯುವ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಅವರಲ್ಲಿ ಕೆಲವರು ಪೊಲೀಸ್, ಇಂಜಿನಿಯರ್, ಎಸ್‌ಡಿಎ ಹೀಗೆ ವಿವಿಧ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದಾರೆ. ಇನ್ನು ಕೆಲವರು ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಸರ್ಕಾರದಲ್ಲಿ ಎರಡೂವರೆ ಲಕ್ಷ ಹುದ್ದೆಗಳಿಗೆ ಮಂಜೂರಾತಿ ದೊರೆತು ಭರ್ತಿಯಾಗದೆ ಖಾಲಿ ಉಳಿದಿವೆ. ಅವುಗಳನ್ನು ಭರ್ತಿ ಮಾಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮಗೆ ಲಂಚ ಕೊಟ್ಟು ಉದ್ಯೋಗ ಪಡೆಯಲು ಶಕ್ತಿ ಇಲ್ಲ. ನಮ್ಮ ಮನೆಯಿಂದ ತಂದೆ ತಾಯಂದಿರು ಬೆಳೆದಿರುವ ಅಕ್ಕಿ, ಗೋಧಿ, ಕಾಳು ಮುಂತಾದ ಧಾನ್ಯಗಳನ್ನು ಕೊಟ್ಟಿದ್ದಾರೆ. ಇದನ್ನು ತೆಗೆದುಕೊಂಡು ಉದ್ಯೋಗ ಕೊಡಿ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ ಎಂದರು.

- Advertisement -

ಪೊಲೀಸ್ ಇಲಾಖೆಯ ಹುದ್ದೆಗಳ ನೇಮಕಾತಿಯಲ್ಲಿ ನಮ್ಮ ರಾಜ್ಯದಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಟ ಮಿತಿ ನಿಗದಿ ಮಾಡಲಾಗಿದೆ. ಇದು ಬೇರೆ ರಾಜ್ಯಗಳಲ್ಲಿ ಹೆಚ್ಚಿದೆ. ನಮ್ಮ ರಾಜ್ಯದಲ್ಲೂ ಈ ವಯಸಿನ ಮಿತಿಯನ್ನು ಎರಿಕೆ ಮಾಡಬೇಕು ಎಂದು ಪ್ರತಿಭಟನೆ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಎಂದು ಮನವಿ ಮಾಡಿದ್ದಾರೆ. ಪಿಎಸ್ಐ ಹಗರಣದ ಬಗ್ಗೆ ಸದನದಲ್ಲಿ ಮಾತನಾಡುವಾಗ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದೇನೆ ಎಂದು ಅವರು ಹೇಳಿದರು.

ಭ್ರಷ್ಟಾಚಾರ ಇಂದು ವ್ಯಾಪಕವಾಗಿ ನಡೆಯುತ್ತಿದೆ. ಈ ವಿಚಾರವನ್ನು ನಾವು ಪ್ರಸ್ತಾಪಿಸಿದರೆ ನಿಮ್ಮ ಕಾಲದಲ್ಲೂ ಭ್ರಷ್ಟಾಚಾರ ಇರಲಿಲ್ವಾ ಎಂದು ಬೇಜವಾಬ್ದಾರಿತನದ ಉತ್ತರ ನೀಡುತ್ತಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ ಆಗ ವಿರೋಧ ಪಕ್ಷದಲ್ಲಿದ್ದ ನೀವು ಏನು ಮಾಡುತ್ತಿದ್ದಿರಿ? ಎಂದು ಪ್ರಶ್ನಿಸಿದರು.

ಉದ್ಯೋಗಾಕಾಂಕ್ಷಿಗಳು ತಮ್ಮ ಬಳಿ ಸರ್ಕಾರಕ್ಕೆ ಲಂಚ ನೀಡಲು ಹಣವಿಲ್ಲ, ಹಾಗಾಗಿ ತಮ್ಮ ಪೋಷಕರು ಬೆಳೆದಿರುವ ಅಕ್ಕಿ, ರಾಗಿ, ಜೋಳ ಮುಂತಾದ ಬೆಳೆಗಳನ್ನು ಒಂದು ಚೀಲದಲ್ಲಿ ಗಂಟು ಕಟ್ಟಿ ಸಭಾಪತಿಗಳ ಮೂಲಕ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ತಲುಪಿಸುವಂತೆ ಕೋರಿ ನನ್ನ ಕೈಗೆ ಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.

ನಮ್ಮ ಸರ್ಕಾರದ ಕಾಲದಲ್ಲಿ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸರ್ಕಾರದ ಬಳಿ ಸೂಕ್ತ ದಾಖಲೆ ಇದ್ದರೆ ತನಿಖೆ ಮಾಡಿಸಲಿ. 2006 ರಿಂದ ಈ ವರೆಗೆ ನಡೆದಿರುವ ಪಿಎಸ್ಐ, ಶಿಕ್ಷಕರ ನೇಮಕಾತಿ ಸೇರಿದಂತೆ ಎಲ್ಲಾ ನೇಮಕಾತಿಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಯಾವೆಲ್ಲಾ ಅಕ್ರಮ, ಭ್ರಷ್ಟಾಚಾರ ನಡೆದಿದೆ ಎಲ್ಲವನ್ನೂ ತನಿಖೆ ಮಾಡಿಸಲಿ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಕೆರೆಯನ್ನು ಮುಚ್ಚಿಹಾಕುವ ಅಥವಾ ಒತ್ತುವರಿ ಮಾಡುವ ಕೆಲಸ ನಾವು ಮಾಡಿಲ್ಲ. ಇದನ್ನು ಗಂಟಾಘೋಷವಾಗಿ ಹೇಳುತ್ತೇನೆ. ಈ ಸರ್ಕಾರದ ಬುಟ್ಟಿಯಲ್ಲಿ ಹಾವಿದ್ದರೆ ತನಿಖೆ ಮಾಡಿಸಲಿ. ನಿನ್ನೆಯೂ ತನಿಖೆ ಮಾಡಿಸುವ ನಿರ್ಧಾರವನ್ನು ನಾನು ಸದನದಲ್ಲೇ ಸ್ವಾಗತ ಮಾಡಿದ್ದೇನೆ ಎಂದು ಹೇಳಿದರು.

ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ಒಟ್ಟು ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ಆಗಲಿ. ಇದುವರೆಗೆ ನಡೆದಿರುವ ಬಿಟ್ ಕಾಯಿನ್ ಹಗರಣ, ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ, ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ, 40% ಕಮಿಷನ್ ಹಗರಣ, ಕೆಪಿಟಿಸಿಎಲ್ ನೇಮಕಾತಿ ಅಕ್ರಮ ಇವೆಲ್ಲವನ್ನೂ ತನಿಖೆ ಮಾಡಿಸಲಿ. ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ವಿರೋಧ ಪಕ್ಷವಾಗಿದ್ದ ಬಿಜೆಪಿ ಯಾಕೆ ಆಗ ಸುಮ್ಮನಿತ್ತು? ಈಗ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿರಲಿಲ್ವಾ ಎಂದು ಕೇಳುತ್ತಿದ್ದಾರೆ. ಇದು ಉತ್ತರವಲ್ಲ ಎಂದು ತಿಳಿಸಿದರು.

ಕೆರೆ ಒತ್ತುವರಿ ಸಂಬಂಧ ತನಿಖೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದನ್ನೂ ನಾನು ಸ್ವಾಗತ ಮಾಡಿದ್ದೇನೆ, ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ 2006 ರಿಂದ 2022 ರ ವರೆಗೆ ಯಾವೆಲ್ಲ ಸರ್ಕಾರಗಳ ಅವಧಿಯಲ್ಲಿ ನೇಮಕಾತಿಗಳು ನಡೆದಿವೆ, ಭ್ರಷ್ಟಾಚಾರ, ಅಕ್ರಮಗಳು ನಡೆದಿವೆ ಅವೆಲ್ಲವನ್ನೂ ನ್ಯಾಯಾಂಗ ತನಿಖೆ ಮಾಡಿ ಎಂದು ಹೇಳುತ್ತಿದ್ದೇನೆ. ಇದಕ್ಕಿಂತ ಇನ್ನೇನು ಹೇಳೋಕಾಗುತ್ತೆ? ಸರ್ಕಾರದ ಬುಟ್ಟಿಯಲ್ಲಿ ಹಾವು ಖಂಡಿತಾ ಇಲ್ಲ, ಸುಮ್ಮನೆ ಇವರೇ ಬುಸ್ ಬುಸ್ ಎಂದು ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.



Join Whatsapp