ನವದೆಹಲಿ: ಹಿಜಾಬ್ ಧರಿಸುವುದು ತನ್ನ ಧರ್ಮಕ್ಕೆ ಅನುಕೂಲಕರವಾಗಿದೆ ಎಂದು ಮುಸ್ಲಿಮ್ ಮಹಿಳೆ ಭಾವಿಸಿದರೆ, ಯಾವುದೇ ಸರ್ಕಾರ ಅಥವಾ ನ್ಯಾಯಾಲಯ ಆಕೆಯನ್ನು ಹಿಜಾಬ್ ಧರಿಸದಂತೆ ತಡೆಯಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲ ದುಷ್ಯಂತ್ ದವೆ ಸುಪ್ರೀಮ್ ಕೋರ್ಟ್ ತಿಳಿಸಿದ್ದಾರೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಸುಪ್ರೀಮ್ ಕೋರ್ಟ್ ಪೀಠವು, ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ.
‘ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ಮೂಲಕ ಸಂವಿಧಾನದ ಅಡಿಯಲ್ಲಿ ಆತ್ಮಸಾಕ್ಷಿಯ ಹಾಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಅಭ್ಯಾಸ ಮಾಡಲು ಅನುವು ಮಾಡಿಕೊಡಬೇಕು. ಈ ಮೂಲಕ ಪ್ರತಿಯೊಬ್ಬರ ಸಂಸ್ಕೃತಿ ಸಂರಕ್ಷಿಸಲು ಅವಕಾಶ ನೀಡಬೇಕು’ ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.
‘ಹಿಜಾಬ್ ಧರಿಸಿರುವ ಮುಸ್ಲಿಂ ಯುವತಿಯರು ಯಾವುದೇ ವ್ಯಕ್ತಿಯ ಭಾವನೆಗಳನ್ನು ನೋಯಿಸುವುದಿಲ್ಲ ಮತ್ತು ಹಿಜಾಬ್ ಆಕೆಯ ಗುರುತು’. ಲವ್ ಜಿಹಾದ್ ವಿವಾದ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅವಕಾಶ ನಿರಾಕರಿಸುವುದು ಅಲ್ಪಸಂಖ್ಯಾತ ಸಮುದಾಯವನ್ನು ಮೂಲೆ ಗುಂಪು ಮಾಡುವ ಷಡ್ಯಂತ್ರವನ್ನು ಸೂಚಿಸುತ್ತದೆ ಎಂದು ಅವರು ವಾದ ಮಂಡಿಸಿದರು.
23 ಅರ್ಜಿಗಳನ್ನು ಈ ಪೀಠದ ಮುಂದೆ ತರಲಾಗಿದ್ದು, ಅವುಗಳಲ್ಲಿ ಕೆಲವು ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವ ಹಕ್ಕನ್ನು ನೀಡುವಂತೆ ಕೋರಿ ಸುಪ್ರೀಮ್ ಕೋರ್ಟ್ ನೇರವಾಗಿ ಸಲ್ಲಿಸಲಾದ ರಿಟ್ ಅರ್ಜಿಗಳಾಗಿವೆ. ಇನ್ನುಳಿದವು ಹಿಜಾಬ್ ನಿಷೇಧವನ್ನು ಎತ್ತಿಹಿಡಿದ ಮಾರ್ಚ್ 15ರ ಕರ್ನಾಟಕ ಹೈಕೋರ್ಟ್’ನ ತೀರ್ಪನ್ನು ಪ್ರಶ್ನಿಸಿದ ಆರ್ಜಿಗಳಾಗಿವೆ.
ರತೀಲಾಲ್ ಗಾಂಧಿ ಪ್ರಕರಣವನ್ನು ಉಲ್ಲೇಖಿಸಿ ನ್ಯಾಯಾಲಯದಲ್ಲಿ ವಾದಿಸಿದ ವಕೀಲ ದವೆ, “ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಗಳಲ್ಲ ಎಂದು ಹೇಳುವ ಹಕ್ಕು ಹೊರಗಿನವರಿಗೆ ಇಲ್ಲ. ಅನುಮಾನದ ಪ್ರಕರಣಗಳಲ್ಲಿ ನ್ಯಾಯಾಲಯವು ಸಾಮಾನ್ಯ ಜ್ಞಾನವನ್ನು ಪರಿಗಣಿಸಬೇಕು. ಹಿಜಾಬ್ ಅತ್ಯಗತ್ಯ ಅಭ್ಯಾಸವಲ್ಲ ಎಂದು ನಾವು ಸಾಮಾನ್ಯ ಜ್ಞಾನದಿಂದ ಹೇಳಬಹುದೇ ಎಂದು ಅವರು ಪೀಠವನ್ನು ಪ್ರಶ್ನಿಸಿದ್ದಾರೆ.