ಚಿಕ್ಕಮಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಸಿ ಟಿ ರವಿ ವಿರುದ್ಧ ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ನಗರದಲ್ಲಿ ಸಿ.ಟಿ.ರವಿ ಭಾವಚಿತ್ರ ದಹಿಸಿ ಬೃಹತ್ ಪ್ರತಿಭಟನೆ ಶನಿವಾರ ನಡೆಯಿತು.
ಪ್ರತಿಭಟನಾಕಾರರನ್ನುದ್ಧೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಕಾರ್ಯಕ್ರಮಗಳನ್ನು ರವಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ರವಿ ಅವರ ಸಾಧನೆ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಯಾಗಿದ್ದು, ಜನರು ಲೂಟಿ ರವಿ ಎನ್ನುತ್ತಾರೆ’ ಎಂದು ಆರೋಪಿಸಿದರು.
20 ವರ್ಷಗಳಿಂದ ಶಾಸಕರಾಗಿರುವ ರವಿ ಕ್ಷೇತ್ರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ತಿಳಿಸಬೇಕು. ಜಿಲ್ಲೆಯಲ್ಲಿ ಮೂರು ವರ್ಷ ಅತಿವೃಷ್ಟಿಯಾಗಿದೆ. ಮನೆ, ಆಸ್ತಿ, ಬೆಳೆ ಕಳೆದುಕೊಂಡವರಿಗೆ ಪರಿಹಾರ ವಿತರಿಸಿಲ್ಲ. ಮಳೆ ಹಾನಿ ವೀಕ್ಷಣೆಗೆ ಬಂದಿದ್ದ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿಸಿದ ರವಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
‘ಶಾಸಕ ಸಿ.ಟಿ.ರವಿ ಅವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಹಿತ ಕಾಂಗ್ರೆಸ್ನ ಯಾವುದೇ ನಾಯಕರ ಬಗ್ಗೆ ಇನ್ನೊಮ್ಮೆ ಹಗುರವಾಗಿ ಮಾತನಾಡಿದರೆ ಬೂತ್, ಗ್ರಾಮಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ರವಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.