ಪಕ್ಷಾಂತರಿ ಹರಿಕೃಷ್ಣಗೆ ರಮಾನಾಥ ರೈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಬೇಬಿ ಕುಂದರ್

Prasthutha|

ಮಂಗಳೂರು: ಕುದ್ರೋಳಿ ದೇವಸ್ಥಾನದಲ್ಲಿ ನಾರಾಯಣ ಗುರು ಜಯಂತಿ ನಡೆಸಿದರೆ ನೂರು ಜನ ಸೇರುವುದಿಲ್ಲ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿಕೆ ನೀಡಿದ್ದು, ಇದರಿಂದ ನಾರಾಯಣ ಗುರುಗಳು ಮತ್ತು ಗೋಕರ್ಣನಾಥೇಶ್ವರ ಆಲಯದ ಭಕ್ತರ ಮನಸ್ಸಿಗೆ ನೋವಾಗಿದೆ. ಆದ್ದರಿಂದ ಹರಿಕೃಷ್ಣ ಅವರು ಕ್ಷಮಾಪಣೆ ಕೇಳಬೇಕು ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಆಗ್ರಹಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಂಟ್ವಾಳ ಕ್ಷೇತ್ರವನ್ನು ನಂಬರ್ ಒನ್ ಮಾಡಿದ ರಮಾನಾಥ ರೈ ಅವರು, ಬಿಜೆಪಿಯವರು ಜಗದ್ಗುರು ನಾರಾಯಣ ಗುರುಗಳ ಜಯಂತಿಯನ್ನು ಖಾಸಗಿ ಹಾಲ್ ನಲ್ಲಿ ನಡೆಸಿದ್ದು ಗುರುಗಳಿಗೆ ಮಾಡಿದ ಅವಮಾನವಾಗಿದೆ. ಜನೋತ್ಸವದಲ್ಲಿ ಗುರುಗಳ ಹೆಸರು ಹೇಳದ್ದು ಕೂಡ ಅವಮಾನಕರ ಎಂದು ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಹರಿಕೃಷ್ಣ ಅವರು ಕರೆದ ಪತ್ರಿಕಾಗೋಷ್ಠಿಯಲ್ಲಿ, ರಮಾನಾಥ ರೈ ಅವರಿಗೆ ಒಂದು ಮೆಟ್ಟಿಲು ಹತ್ತಲು ಆಗದ ಅನಾರೋಗ್ಯ ಇದೆ ಎಂದು ಹೇಳಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಪಕ್ಷಾಂತರಿ ಹರಿಕೃಷ್ಣ ಅವರು ರೈ ಅವರಿಗೆ ಸವಾಲು ಹಾಕುವ ಮಟ್ಟದ ರಾಜಕಾರಣಿ ಅಲ್ಲ. ಹರಿಕೃಷ್ಣ ಬಂಟ್ವಾಳ ವಿಧಾನ ಪರಿಷತ್ ಟಿಕೆಟ್ ಸಿಗದಿದ್ದಾಗ ಆಸ್ಕರ್ ಮತ್ತು ರೈಗಳನ್ನು ಬಯ್ದವರು. ಕೆಲವು ಚುನಾವಣೆಗೆ ನಿಂತು ಗೆಲ್ಲಲಾಗಿಲ್ಲ. ಬರೇ 120 ಮತ ಪಡೆದಿದ್ದರು. ಅವರು ರಮಾನಾಥ ರೈ ಬಗ್ಗೆ ಮಾತನಾಡುವುದು ಮೂರ್ಖತನ ಎಂದು ಬೇಬಿ ಕುಂದರ್ ಕಿಡಿಕಾರಿದರು.

- Advertisement -

ನಡೆದಾಡುವ ನಾರಾಯಣ ಗುರುಗಳು ಜನಾರ್ದನ ಪೂಜಾರಿಯವರು. ಅವರ ಮನೆ, ಕಚೇರಿಯನ್ನು ಇದೇ ಹರಿಕೃಷ್ಣ ಬಂಟ್ವಾಳ ಕಾಯತೊಡಗಿದಾಗಿನಿಂದ ಪೂಜಾರಿ ಅವರು ಗೆಲ್ಲಲಾಗಿಲ್ಲ. ಇತ್ತೀಚೆಗೆ ಕಿಯೋನಿಕ್ಸ್ ಅಧ್ಯಕ್ಷರಾಗಿದ್ದು ಸೊನ್ನೆ ಸಾಧನೆ ಮಾಡಿದ್ದಾರೆ. ಮನೆ ಮಾತ್ರ ಜೋರಾಗಿ ಮಾಡಿಕೊಂಡರು ಎಂದು ಕುಂದರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ನೀರಜ್ ಪಾಲ್, ಡಾ. ರಾಜಾರಾಂ, ಉಮೇಶ ದಂಡಕೇರಿ, ಸುಧೀರ್ ಕುಮಾರ್ ಶೆಟ್ಟಿ, ಚಂದ್ರಹಾಸ ಪೂಜಾರಿ ಉಪಸ್ಥಿತರಿದ್ದರು.



Join Whatsapp