ನಿವೃತ್ತಿ ಘೋಷಿಸಿದ ಟೆನಿಸ್ ದಂತಕಥೆ ರೋಜರ್ ಫೆಡರರ್

Prasthutha|

ಟೆನಿಸ್ ಜಗತ್ತಿನ ‘ಬ್ರ್ಯಾಂಡ್ ಅಂಬಾಸಿಡರ್’ ಎಂದೇ ಖ್ಯಾತಿವೆತ್ತ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ 20 ಗ್ರ್ಯಾಂಡ್ ಸ್ಲಾಮ್ ಗೆದ್ದ ಮೊದಲ ಆಟಗಾರ ಸ್ವಿಜರ್ಲ್ಯಾಂಡ್’ನ ರೋಜರ್ ಫೆಡರರ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.

- Advertisement -

ತನ್ನ ಟ್ವಿಟರ್ ಖಾತೆಯಲ್ಲಿ 4:34 ನಿಮಿಷಗಳ ಆಡಿಯೋ ಸಂದೇಶವನ್ನು ಹಂಚಿಕೊಂಡಿರುವ ಫೆಡರರ್, ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್‌, ತನ್ನ ವೃತ್ತಿ ಜೀವನದ ಅಂತಿಮ ಟೂರ್ನಿಗ ಆಗಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

2021ರ ವಿಂಬಲ್ಡನ್ ಕ್ವಾರ್ಟರ್ ಫೈನಲ್ ಪಂದ್ಯದ ಸೋಲಿನ ಬಳಿಕ ಫೆಡರರ್, ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ರೋಜರ್ ಟೆನಿಸ್ ಅಂಗಳದಿಂದ ದೂರ ಉಳಿದಿದ್ದಾರೆ.

- Advertisement -

ಮುಂದಿನ ವಾರ ಲಂಡನ್‌ನಲ್ಲಿ ನಡೆಯಲಿರುವ ಲೇವರ್ ಕಪ್ ನನ್ನ ಅಂತಿಮ ಎಟಿಪಿ ಟೂರ್ನಿ ಆಗಿರಲಿದೆ ಎಂದು ರೋಜರ್ ಫೆಡರರ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

“ನನಗೆ ಈಗ 41 ವರ್ಷ ವಯಸ್ಸಾಗಿದ್ದು, ನಾನು 24 ವರ್ಷಗಳ ಟೆನಿಸ್ ಜೀವನದಲ್ಲಿ 1500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್ ಆಟವನ್ನು ನಾನು ಯಾವಾಗಲೂ ನನ್ನ ನಿರೀಕ್ಷೆಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಈಗ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಿದೆ ಎಂದು ಒಪ್ಪಿಕೊಳ್ಳುತ್ತೇನೆ. ನನಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ” ಎಂದು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಆಡಿಯೋದಲ್ಲಿ ಫೆಡರರ್ ಹೇಳಿದ್ದಾರೆ.

41 ವರ್ಷದ ಫೆಡರರ್, 2013ರಲ್ಲಿ ವಿಂಬಲ್ಡನ್‌ ಅಂಗಳದಲ್ಲಿ ಚಾಂಪಿಯನ್ ಆಗುವ ಮೂಲಕ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. ಆ ಬಳಿಕ 6 ಆಸ್ಟ್ರೇಲಿಯನ್ ಓಪನ್, 5. ಯುಎಸ್ ಓಪನ್, 8 ವಿಂಬಲ್ಡನ್ ಹಾಗೂ 1 ಫ್ರೆಂಚ್ ಓಪನ್ ಸೇರಿದಂತೆ ಒಟ್ಟು 20 ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಟೆನಿಸ್ ಆಟಕ್ಕೆ ಹೊಸ ವ್ಯಾಖ್ಯಾನ ಬರೆದಿದ್ದ ತ್ರಿವಳಿ ಆಟಗಾರರಲ್ಲಿ ಫೆಡರರ್ ಮೊದಲಿಗರಾಗಿದ್ದಾರೆ. ಅದಾಗಿಯೂ ಸ್ಪೇನ್‌ನ ರಫೆಲ್ ನಡಾಲ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ , ಗ್ರ್ಯಾಂಡ್ ಸ್ಲಾಮ್ ಗಳಿಕೆಯಲ್ಲಿ ಫೆಡರರ್ ರನ್ನು ಹಿಂದಿಕ್ಕಿದ್ದಾರೆ.

ಇತ್ತೀಚೆಗಷ್ಟೇ 23 ಗ್ರ್ಯಾಂಡ್ ಸ್ಲಾಮ್ ಒಡೆತಿ ಅಮೆರಿಕಾದ ಸೆರೆನಾ ವಿಲಿಯಮ್ಸ್ ಟೆನಿಸ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು.



Join Whatsapp